ಬೆಳಗಾವಿ, ಏಪ್ರಿಲ್ 22:
“ಮತ್ತೆಮುಸಲ್ಮಾನರು, ಹಿಂದುಳಿದವರು ಮಾತ್ರವಲ್ಲದೆ ಎಲ್ಲ ಧರ್ಮದ ಹಾಗೂ ಜಾತಿಯ ಬಡವರಿಗೆ ಶಿಕ್ಷಣ ಲಭಿಸಬೇಕು. ಅವರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬಬೇಕು. ಇದೇ ನಮ್ಮ ಸರ್ಕಾರದ ಗುರಿ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅವರು ಇಂದು ಬೆಳಗಾವಿಯ ಸಾಂಭ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಸಾಮಾಜಿಕ ಸಮೀಕ್ಷೆಯ ಮೂಲಪ್ರತಿ ತಮ್ಮ ಬಳಿ ಇದೆ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಆರೋಪವನ್ನು ಖಂಡಿಸಿದರು. “ಆರ್. ಅಶೋಕ್ ಯಾವತ್ತಾದರೂ ಸತ್ಯ ಹೇಳಿದ್ದಾರೆಯೇ? ಅವರು ಸದಾ ಸುಳ್ಳು ಮಾತನಾಡುತ್ತಾರೆ. ಮೂಲ ಪ್ರತಿ ನನ್ನ ಬಳಿ ಹೇಗೆ ಇರಬಹುದು?” ಎಂದು ಪ್ರಶ್ನಿಸಿದ ಅವರು, “ನಾವು ರಾಹುಲ್ ಗಾಂಧಿಗೆ ಪತ್ರ ಬರೆದಿಲ್ಲ. ಆದರೆ ಸಮೀಕ್ಷೆಯ ಬಗ್ಗೆ ಚರ್ಚೆ ಮಾಡಿ, ಸಂಪುಟ ಸಭೆಯಲ್ಲಿ ವರದಿ ಮಂಡಿಸಿದ್ದೇವೆ” ಎಂದರು.
ಜಾತಿಗಣತಿ: ಅಂತಿಮ ತೀರ್ಮಾನ ಸಂಪುಟ ಚರ್ಚೆಯ ನಂತರ
ಜಾತಿಗಣತಿ ಕುರಿತಂತೆ ಕೆಲ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರವಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು, “ಸಂಪುಟ ಸಭೆಯಲ್ಲಿ ಯಾರೂ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಸಚಿವರಿಗೆ ವರದಿಯನ್ನು ಓದಿಕೊಂಡು ಅಭಿಪ್ರಾಯ ನೀಡುವಂತೆ ಸೂಚಿಸಲಾಗಿದೆ. ಅವರ ಅಭಿಪ್ರಾಯಗಳ ಬಳಿಕ ಮತ್ತೆ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.”
ಯಾವ ಜಾತಿಗೂ ಅನ್ಯಾಯವಾಗಬಾರದು
“ಯಾವ ಜಾತಿಗೂ ಅನ್ಯಾಯವಾಗಬಾರದು ಎಂಬುದೇ ಸರ್ಕಾರದ ನಿಲುವು. ಇದು ಕೇವಲ ಜಾತಿ ಸಮೀಕ್ಷೆ ಅಲ್ಲ; ಇದು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯ ಸಮೀಕ್ಷೆ. ಸಂವಿಧಾನ ಜಾರಿಯಾಗಿ 75 ವರ್ಷಗಳಾದರೂ ಬಡವರು ಬಡವರಾಗಿಯೇ ಉಳಿಯಬೇಕೆ? ಅವರಿಗೆ ಸಮಾನತೆ ಬೇಕಲ್ಲವೇ? ಜಾತಿಗೆ ಅಂಟಿಕೊಂಡು ಇರುವ ಪರಿಸ್ಥಿತಿ ಇನ್ನಷ್ಟು ಮುಂದೆ ಹೋಗಬೇಕೆ?” ಎಂದು ಅವರು ಪ್ರಶ್ನಿಸಿದರು.