ಬೆಂಗಳೂರು: ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಏಪ್ರಿಲ್ 29 ಹಾಗೂ 30 ರಂದು ಜರುಗಲಿರುವ “ಅನುಭವ ಮಂಟಪ – ಬಸವಾದಿ ಶರಣರ ವೈಭವ” ರಾಜ್ಯಮಟ್ಟದ ವಿಶಿಷ್ಟ ಕಾರ್ಯಕ್ರಮಕ್ಕೆ ಮುನ್ನುಡಿಯಾಗಿ, “ಅನುಭವ ಮಂಟಪ – ಬಸವಾದಿ ಶರಣರ ವೈಭವ” ರಥಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಾಗಲಕೋಟೆ ಜಿಲ್ಲಾಡಳಿತ ಹಾಗೂ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಳ್ಳುತ್ತಿರುವ ಈ ಮಹತ್ವದ ಕಾರ್ಯಕ್ರಮದ ಅಂಗವಾಗಿ, ವಿಶೇಷ ರಥವು ಬೆಂಗಳೂರಿನಿಂದ ಹೊರಟು ಬೆಳಗಾವಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಶರಣ ಸಂಸ್ಕೃತಿಯ ಪವಿತ್ರ ಸಂದೇಶವನ್ನು ಹರಡಲಿದೆ.

ಈ ರಥಯಾತ್ರೆಗೆ ಏಪ್ರಿಲ್ 17ರಂದು ಮಧ್ಯಾಹ್ನ 3.30ಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ. ಇದೇ ವೇದಿಕೆಯಲ್ಲಿ “ಅನುಭವ ಮಂಟಪ – ಬಸವಾದಿ ಶರಣರ ವೈಭವ” ಕಾರ್ಯಕ್ರಮದ ಅಧಿಕೃತ ಲಾಂಛನವನ್ನೂ ಅವರು ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ, ಸಚಿವ ಸಂಪುಟದ ಅನೇಕ ಸಚಿವರು ಮತ್ತು ಶಾಸಕರು ಹಾಗೂ ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ.
ಈ ವಿಶೇಷ ಕಾರ್ಯಕ್ರಮದ ಮೂಲಕ ಬಸವ ತತ್ತ್ವ ಹಾಗೂ ಶರಣರ ಅಧ್ಯಾತ್ಮಿಕ ಮೌಲ್ಯಗಳನ್ನು ರಾಜ್ಯದಾದ್ಯಂತ ಜನತೆಗೆ ಪರಿಚಯಿಸಿ, ಶ್ರದ್ಧಾ ಹಾಗೂ ಸಾಂಸ್ಕೃತಿಕ ಬೆಳೆವಣಿಗೆಗೆ ಉತ್ತೇಜನ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.