ಬೆಂಗಳೂರು: SRGA ಎಂಬ ಸಂಸ್ಥೆಯ ಹೆಸರಲ್ಲಿ ನಕಲಿ ಗುಂಪು ರಚಿಸಿ, 100ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಯಶವಂತಪುರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 20ಕ್ಕೂ ಹೆಚ್ಚು ಸಂತ್ರಸ್ತರು ದೂರು ನೀಡಿದ್ದು, ಪರಂ ಮತ್ತು ಲತಾ ಎಂಬ ಇಬ್ಬರು ಮುಖ್ಯ ಆರೋಪಿಗಳಾಗಿದ್ದಾರೆ.
ಆರೋಪಿಗಳು ಆರಂಭದಲ್ಲಿ 2500 ರೂಪಾಯಿ ಹಣ ಪಡೆದು, ಪ್ರತಿದಿನ 50 ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಮೂರು ತಿಂಗಳ ಕಾಲ ಈ ರೀತಿ ಹಣ ನೀಡುವುದಾಗಿ ನಂಬಿಸಿ, ಹೆಚ್ಚಿನ ಹಣವನ್ನು ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಸಂತ್ರಸ್ತರು ವಿವಿಧ ಯೋಜನೆಗಳ ಆಧಾರದ ಮೇಲೆ ಹಣ ಹೂಡಿಕೆ ಮಾಡಿದ್ದು, ಆರೋಪಿಗಳು ಹಣದ ಮೊತ್ತ ಹೆಚ್ಚಾದಂತೆ ವಂಚನೆಗೆ ಮುಂದಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪರಂ ಮತ್ತು ಲತಾ ಎಂಬ ಇಬ್ಬರು ಆರೋಪಿಗಳು ಮನೆ ಮನೆಗೆ ತೆರಳಿ ಜನರನ್ನು ರಿಜಿಸ್ಟರ್ ಮಾಡಿಸಿ, ಹಣ ಪಡೆದು ಡಾಲರ್‌ಗೆ ಪರಿವರ್ತಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಪರಂ 98 ಲಕ್ಷ ರೂಪಾಯಿ ಮತ್ತು ಲತಾ 60 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.
ಇದಲ್ಲದೆ, ಆರೋಪಿಗಳು ಸಂತ್ರಸ್ತರಿಗೆ ಇತರರನ್ನು ಈ ಯೋಜನೆಗೆ ಸೇರಿಸಿದರೆ ಕಮಿಷನ್ ನೀಡುವುದಾಗಿ ಭರವಸೆ ನೀಡಿ, ಹೆಚ್ಚಿನ ಜನರನ್ನು ವಂಚನೆಗೆ ಒಳಪಡಿಸಿದ್ದಾರೆ. ಕೆಲವು ಸಂತ್ರಸ್ತರು 3 ಲಕ್ಷ, 5 ಲಕ್ಷ ಮತ್ತು 10 ಲಕ್ಷ ರೂಪಾಯಿಗಳನ್ನು ವೈಯಕ್ತಿಕವಾಗಿ ಹೂಡಿಕೆ ಮಾಡಿದ್ದು, ವಂಚನೆಗೊಳಗಾಗಿದ್ದಾರೆ.
ಪ್ರಕರಣ ಸಂಬಂಧ ಯಶವಂತಪುರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಪರಂ ಸಕ್ಲೇಜ್ ಮತ್ತು ಲತಾ ಇಬ್ಬರ ವಿರುದ್ಧ ದೂರಿನನ್ವಯ FIR ದಾಖಲಿಸಲಾಗಿದೆ. 25 ಜನರಿಗೆ 84,91,400 ರೂಪಾಯಿ ವಂಚನೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿ, ತನಿಖೆಗೆ ಮುಂದಾಗಿದ್ದಾರೆ.