ಮೈಸೂರು, ಏಪ್ರಿಲ್ 26: ಸ್ವಾತಂತ್ರ್ಯ ಹೋರಾಟ ಮತ್ತು ಆಧುನಿಕ ಭಾರತದ ನಿರ್ಮಾಣದಲ್ಲಿ ಕಾಂಗ್ರೆಸ್‌ನ ತ್ಯಾಗ-ಬಲಿದಾನ ಮಹತ್ವದ ಪಾತ್ರವಹಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಯುವ ಕಾಂಗ್ರೆಸ್ ಆಯೋಜಿಸಿದ್ದ “ಯುವ ಕ್ರಾಂತಿ” ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಸಂಘ ಪರಿವಾರವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದಿದ್ದರೂ ಈಗ ದೇಶಭಕ್ತಿಯ ಬಗ್ಗೆ ಮಾತನಾಡುತ್ತದೆ ಎಂದು ವ್ಯಂಗ್ಯವಾಡಿದರು.
“ಸಾವರ್ಕರ್ ಮತ್ತು ಗೋಲ್ವಾಲ್ಕರ್ ಡಾ. ಅಂಬೇಡ್ಕರ್‌ರ ಸಂವಿಧಾನದ ವಿರುದ್ಧವಾಗಿದ್ದರು. ಕಾಂಗ್ರೆಸ್ ದೇಶಕ್ಕೆ ನಾಗರಿಕ ಹಕ್ಕು ಮತ್ತು ಸಾಮಾಜಿಕ ನ್ಯಾಯ ಒದಗಿಸಲು ಹುಟ್ಟಿತು. ಗಾಂಧೀಜಿ ಸ್ವಾತಂತ್ರ್ಯ ಹೋರಾಟಕ್ಕೆ ನಾಯಕತ್ವ ನೀಡಿದರೆ, ನೆಹರು ಬಹುತ್ವದ ಭಾರತಕ್ಕೆ ಭದ್ರ ಬುನಾದಿ ಹಾಕಿದರು. ಯುವ ಕಾಂಗ್ರೆಸ್ ಭಾರತದ ಸಂವಿಧಾನ ಮತ್ತು ಬಹುತ್ವವನ್ನು ರಕ್ಷಿಸುವ ಯುವ ಸೈನ್ಯವಾಗಿದೆ,” ಎಂದು ಸಿದ್ದರಾಮಯ್ಯ ಹೇಳಿದರು.
“ಮನುಸ್ಮೃತಿ ಪ್ರೇರಿತ ಜಾತಿ ವ್ಯವಸ್ಥೆ ಭಾರತದ ಸಮಾಜವನ್ನು ಒಡೆದಿತು. ಬಿಜೆಪಿ ಬಲಾಡ್ಯರಿಗೆ ಅಧಿಕಾರ ನೀಡುತ್ತದೆ, ಆದರೆ ಕಾಂಗ್ರೆಸ್ ಜನಸಾಮಾನ್ಯರಿಗೆ ಅವಕಾಶ ಕೊಡುತ್ತದೆ. ಬಿಜೆಪಿ ಸಂವಿಧಾನ ವಿರೋಧಿಯಾಗಿದೆ. ಮೌಡ್ಯ, ಕಂದಾಚಾರ ಮತ್ತು ಕರ್ಮ ಸಿದ್ಧಾಂತವನ್ನು ಬಿಜೆಪಿ ಕೃತಕವಾಗಿ ಬೆಳೆಸುತ್ತದೆ. ಶರಣ ಬಸವಣ್ಣನವರ ರೀತಿಯಲ್ಲಿ ದೇವರನ್ನು ಕಾಣಬೇಕು, ದೇವರ ಹೆಸರಲ್ಲಿ ಸುಳ್ಳು ಹರಡುವವರ ಬಗ್ಗೆ ಎಚ್ಚರಿಕೆಯಿರಲಿ,” ಎಂದು ಅವರು ಎಚ್ಚರಿಸಿದರು.
ಪಾಕಿಸ್ತಾನಿ ಪ್ರಜೆಗಳ ವಾಪಸಾತಿಗೆ ಕ್ರಮ: ಕರ್ನಾಟಕದಲ್ಲಿ ಇರಬಹುದಾದ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಕೇಂದ್ರ ಸರ್ಕಾರದ ಸೂಚನೆಯಂತೆ ಅವರನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು. “ರಾಜ್ಯದ ವಿವಿಧ ನಗರಗಳಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ, ಇಂತಹ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗುವುದು,” ಎಂದರು.
ಕಾಶ್ಮೀರದ ಭದ್ರತಾ ವೈಫಲ್ಯ: ಕಾಶ್ಮೀರದ ಉಗ್ರರ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, “ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕಿತ್ತು. ಪುಲ್ವಾಮಾದಲ್ಲಿ 40 ಯೋಧರು ಪ್ರಾಣ ಕಳೆದುಕೊಂಡಿದ್ದರು. ಈಗ 26 ಜನರ ಪ್ರಾಣ ಹಾನಿಯಾಗಿದೆ. ಕೇಂದ್ರ ಸರ್ಕಾರದ ಮೇಲೆ ಭರವಸೆ ಇಟ್ಟು ಪ್ರವಾಸಿಗರು ಹೋಗಿದ್ದರು. ಈಗ ಯಾವ ಕ್ರಮ ಕೈಗೊಂಡರೂ ಮೃತರು ಬದುಕಿ ಬರುವುದಿಲ್ಲ. ಕಾಶ್ಮೀರದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಸಚಿವ ಸಂತೋಷ್ ಲಾಡ್ ಸುರಕ್ಷಿತವಾಗಿ ಕರೆತಂದಿದ್ದಾರೆ,” ಎಂದರು.
ಯುದ್ಧದ ಬದಲು ಭದ್ರತೆ ಬಿಗಿಗೊಳಿಸಿ: ಪಾಕಿಸ್ತಾನದ ವಿರುದ್ಧ ಯುದ್ಧದ ಅಗತ್ಯವಿಲ್ಲ ಎಂದ ಸಿದ್ದರಾಮಯ್ಯ, “ಕಾಶ್ಮೀರದಲ್ಲಿ ಶಾಂತಿ ನೆಲೆಗೊಳ್ಳಲು ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಬೇಕು. ನಾವು ಯುದ್ಧದ ಪರವಲ್ಲ,” ಎಂದರು.
ಪ್ರಧಾನಿಗೆ ಚುನಾವಣೆಯೇ ಮುಖ್ಯ: ಕಾಶ್ಮೀರ ದಾಳಿಗೆ ಸಂಬಂಧಿಸಿದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಮಂತ್ರಿಗಳು ಭಾಗವಹಿಸದಿರುವ ಬಗ್ಗೆ, “ಇದು ಮಹತ್ವದ ಸಭೆಯಾಗಿತ್ತು. ಆದರೆ, ಪ್ರಧಾನಿಗೆ ಬಿಹಾರ ಚುನಾವಣಾ ಪ್ರಚಾರವೇ ಮುಖ್ಯವೆಂದು ಕಾಣುತ್ತದೆ. ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ,” ಎಂದು ಟೀಕಿಸಿದರು.
ಚಾಮರಾಜನಗರದ ಕಳಂಕ ತೊಡೆದೆ: ಚಾಮರಾಜನಗರಕ್ಕೆ 20 ಬಾರಿ ಭೇಟಿ ನೀಡಿರುವ ಬಗ್ಗೆ, “ಮೊದಲ ಭೇಟಿಯಲ್ಲೇ ‘ಅಧಿಕಾರ ಹೋಗುತ್ತದೆ’ ಎಂಬ ಕಳಂಕವನ್ನು ತೊಡೆದುಹಾಕಿದೆ,” ಎಂದು ಸಿದ್ದರಾಮಯ್ಯ ಹೇಳಿದರು.
ಯುವ ಕಾಂಗ್ರೆಸ್‌ನಂತಹ ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಬೇಕು ಎಂದು ಅವರು ಕರೆ ನೀಡಿದರು.