ಮಂಡ್ಯ: ಕೆಆರ್‌ಎಸ್ ಬೃಂದಾವನ ಉದ್ಯಾನವನದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ಕಾವೇರಿ ಆರತಿ ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.
ಸಭೆಯಲ್ಲಿ ಸಚಿವರಾದ ಎಚ್.ಕೆ. ಪಾಟೀಲ್, ರಾಮಲಿಂಗಾರೆಡ್ಡಿ, ಶಿವರಾಜ್ ತಂಗಡಗಿ, ಶಾಸಕ ರವಿ ಗಣಿಗ, ಎಂಎಲ್‌ಸಿ ದಿನೇಶ್ ಗೂಳಿಗೌಡ, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಮಂಡ್ಯ ಜಿಲ್ಲಾಧಿಕಾರಿ ಕುಮಾರ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್, ತಾಂತ್ರಿಕ ಸಲಹೆಗಾರ ಜೈಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣವು ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಸ್ಥಳೀಯ ಆರ್ಥಿಕತೆಗೆ ಚೈತನ್ಯ ತರುವ ಗುರಿಯನ್ನು ಹೊಂದಿದೆ. ಕಾವೇರಿ ಆರತಿ ಕಾರ್ಯಕ್ರಮವು ಸಾಂಸ್ಕೃತಿಕವಾಗಿ ಮಹತ್ವದ್ದಾಗಿದ್ದು, ಭಕ್ತರನ್ನು ಆಕರ್ಷಿಸಲಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಯೋಜನೆಯ ತಾಂತ್ರಿಕ ಮತ್ತು ಆಡಳಿತಾತ್ಮಕ ಅಂಶಗಳ ಬಗ್ಗೆ ವಿವರವಾದ ಮಾಹಿತಿಯನ್ನು ಅಧಿಕಾರಿಗಳು ಮಂಡಿಸಿದರು.
ಡಿ.ಕೆ. ಶಿವಕುಮಾರ್ ಅವರು, ಯೋಜನೆಯನ್ನು ಶೀಘ್ರವಾಗಿ ಕಾರ್ಯಗತಗೊಳಿಸಲು ಸೂಚನೆ ನೀಡಿದ್ದು, ಗುಣಮಟ್ಟ ಮತ್ತು ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.