ಬೆಂಗಳೂರು, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಎಲ್ಲ ವರ್ಗದವರಿಗೆ ಒದಗಿಸುವ ದೃಷ್ಟಿಯಿಂದ, ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ಸಮಗ್ರ ಸಮೀಕ್ಷೆಯನ್ನು 2025ರಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಮಹತ್ವದ ಸಮೀಕ್ಷೆಯು ನ್ಯಾಯಾಂಗ ಹಾಗೂ ಸಂವಿಧಾನಬದ್ಧ ಪ್ಯಾರಾಮೀಟರ್‌ಗಳನ್ನು ಆಧರಿಸಿಕೊಂಡು ನಡೆಸಲಾಗುತ್ತಿದೆ.
ರಾಜ್ಯದ ಪರಿಶಿಷ್ಟ ಜಾತಿಗಳ ಶ್ರೇಣೀಕರಣ ಮತ್ತು ಒಳಮೀಸಲಾತಿಗೆ ಸಂಬಂಧಿಸಿದಂತೆ ಭಾರತೀಯ ಸಂವಿಧಾನದ ಕಲಂ 15(4) ಮತ್ತು 16(4) ಅಡಿಯಲ್ಲಿ ಸರ್ವೋಚ್ಛ ನ್ಯಾಯಾಲಯವು 2024ರ ಆಗಸ್ಟ್ 1ರಂದು ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಡಾ. ಹೆಚ್.ಎನ್. ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿದೆ. ಈ ಆಯೋಗವು ಅಂತರ ಹಿಂದುಳಿದಿಕೆ (Inter-se backwardness) ಮತ್ತು ಪ್ರಾತಿನಿಧ್ಯದ ಆಧಾರದ ಮೇಲೆ ಶ್ರೇಣೀಕರಣ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ.
ಅಂತರ್ಜಾತೀಯ ಅಸಮತೆ ಹಾಗೂ ಶ್ರೇಣೀಕರಣದ ಅಗತ್ಯವನ್ನು ಮನಗಂಡು, 2025ರ ಜನವರಿಯಿಂದ ಮಾರ್ಚ್‌ವರೆಗೂ 4034 ಅಹವಾಲುಗಳು ಮತ್ತು ಮನವಿಗಳನ್ನು ಆಯೋಗ ಸ್ವೀಕರಿಸಿದೆ. ಈ ಅಹವಾಲುಗಳ ಪರಿಶೀಲನೆಯ ನಂತರ, ವಿಜ್ಞಾನಾಧಾರಿತ ದತ್ತಾಂಶ ಸಂಗ್ರಹಣೆಗಾಗಿ ರಾಜ್ಯವ್ಯಾಪಿ ಸಮೀಕ್ಷೆ ನಡೆಸಬೇಕೆಂದು ಶಿಫಾರಸ್ಸು ಮಾಡಲಾಗಿದೆ.
ಸಮೀಕ್ಷೆಯು ಮೂರು ಹಂತಗಳಲ್ಲಿ ನಡೆಯುತ್ತಿದೆ:
- ದಿನಾಂಕ: 05-05-2025 ರಿಂದ 17-05-2025: ಮನೆ ಮನೆ ಸಮೀಕ್ಷೆ
- ದಿನಾಂಕ: 19-05-2025 ರಿಂದ 21-05-2025: ವಿಶೇಷ ಶಿಬಿರಗಳ ಮೂಲಕ ಸಮೀಕ್ಷೆ
- ದಿನಾಂಕ: 19-05-2025 ರಿಂದ 23-05-2025: ಆನ್‌ಲೈನ್ ಸ್ವಯಂ ಘೋಷಣೆ
ಸಮೀಕ್ಷೆಗಾಗಿ ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿದ Android Mobile App ಬಳಸಲಾಗುತ್ತಿದ್ದು, ದತ್ತಾಂಶ ಸಂಗ್ರಹವನ್ನು ವೇಗವಾಗಿ ಹಾಗೂ ನಿಖರವಾಗಿ ನೆರವೇರಿಸಲು ಉದ್ದೇಶಿಸಲಾಗಿದೆ. ಸಮೀಕ್ಷೆಯ ಸಮಯದಲ್ಲಿ “ಆದಿ ಕರ್ನಾಟಕ”, “ಆದಿ ದ್ರಾವಿಡ”, “ಆದಿ ಆಂಧ್ರ” ಎಂದು ಗುರುತಿಸಲಾದರು ತಮ್ಮ ಮೂಲ ಜಾತಿಗಳನ್ನು ಸ್ಪಷ್ಟವಾಗಿ ದಾಖಲಿಸಬೇಕಾಗಿದೆ.
ಈ ಸಮೀಕ್ಷೆಗೆ ಸುಮಾರು 65,000 ಸಮೀಕ್ಷಾದಾರರು ಮತ್ತು ಮೇಲ್ವಿಚಾರಕರು ನಿಯೋಜಿಸಲ್ಪಟ್ಟಿದ್ದಾರೆ. ಅವರಿಗೆ ಸೂಕ್ತ ತರಬೇತಿಯನ್ನು ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ನೀಡಲಾಗಿದೆ. ಮೊಬೈಲ್ ಆಪ್‌ನಲ್ಲಿ 42 ಪ್ರಶ್ನೆಗಳನ್ನೊಳಗೊಂಡ ಸಮಗ್ರ ಮಾಹಿತಿ ಸಂಗ್ರಹಣೆಯು ನಡೆಯುತ್ತಿದ್ದು, ಈ ಮಾಹಿತಿಯು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ಉದ್ಯೋಗದ ಅಂಶಗಳನ್ನು ಒಳಗೊಂಡಿರುತ್ತದೆ.
ರಾಜ್ಯ ಮಟ್ಟದ ಸಹಾಯವಾಣಿ ಸಂಖ್ಯೆ 9481359000 ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಈ ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದು.
ಸಮೀಕ್ಷೆಯ ಯಶಸ್ಸಿಗಾಗಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಇದು ಮುಂಬರುವ ಮೀಸಲಾತಿ ನೀತಿಗಳನ್ನು ವೈಜ್ಞಾನಿಕವಾಗಿ ರೂಪಿಸಲು ಪ್ರಮುಖ ಪಾತ್ರವಹಿಸಲಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.