ಬೆಂಗಳೂರು, ಮೇ 16:
ಪ್ರಸಿದ್ಧ ನಟಿ ರುಕ್ಮಿಣಿ ವಿಜಯ್ ಕುಮಾರ್ ಬ್ಯಾಗ್ ಕಳವಾಗಿದ್ದ ಪ್ರಕರಣವನ್ನು ಪೊಲೀಸರು ಸುಳಿವಿನಿಂದ ಪತ್ತೆ ಹಚ್ಚಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಈ ಪ್ರಕರಣದಲ್ಲಿ ಮಹಮ್ಮದ್ ಮಸ್ತಾನ್ ಎಂಬ ಕ್ಯಾಬ್ ಚಾಲಕನನ್ನು ಬಂಧಿಸಿದ್ದಾರೆ.
ಮೇ 11ರಂದು ಬೆಳಗ್ಗೆ ನಟಿ ರುಕ್ಮಿಣಿ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂ.18 ಬಳಿ ತನ್ನ ಕಾರು ನಿಲ್ಲಿಸಿ ವಾಕಿಂಗ್ ಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅವರು ದುಬಾರಿ ಬೆಲೆಯ ಬ್ಯಾಗ್, ಪರ್ಸ್, ಡಬಲ್ ಬ್ಯಾಂಡೆಡ್ ಡೈಮಂಡ್ ರಿಂಗ್ ಮತ್ತು ಇತರೆ ಅಮೂಲ್ಯ ವಸ್ತುಗಳನ್ನು ಕಾರಿನೊಳಗೆ ಇಟ್ಟುಹೋಗಿದ್ದು, ಕಾರ್ ಲಾಕ್ ಮಾಡೋದನ್ನ ಮರೆತಿದ್ದರು.
ಇದನ್ನು ಗಮನಿಸಿದ್ದ ಆರೋಪಿ ಮಹಮ್ಮದ್ ಮಸ್ತಾನ್, ನಟಿಯ ಕಾರಿನಲ್ಲಿ ಇದ್ದ ಬ್ಯಾಗ್ ಅನ್ನು ಕದ್ದು ಪರಾರಿಯಾಗಿದ್ದ. ಘಟನೆ ಸಂಬಂಧಿತವಾಗಿ ನಟಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿ ಮಹಮ್ಮದ್ ಮಸ್ತಾನ್‌ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಂಧಿತನಿಂದ ಒಟ್ಟು ರೂ.23 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಒಂದೂವರೆ ಲಕ್ಷ ಮೌಲ್ಯದ ಡಿಸೈನರ್ ಬ್ಯಾಗ್, ರೂ.75 ಸಾವಿರ ಮೌಲ್ಯದ ಪರ್ಸ್, 10 ಲಕ್ಷದ ಡಬಲ್ ಬ್ಯಾಂಡೆಡ್ ಡೈಮಂಡ್ ರಿಂಗ್, 9 ಲಕ್ಷದ ರೊಲೆಕ್ಸ್ ವಾಚ್ ಹಾಗೂ 3 ಲಕ್ಷ ಮೌಲ್ಯದ ಮತ್ತೊಂದು ಡೈಮಂಡ್ ರಿಂಗ್ ಸೇರಿವೆ.
ರುಕ್ಮಿಣಿ ‘ಭಜರಂಗಿ’ ಚಿತ್ರದಲ್ಲಿ ಕೃಷ್ಣೆ ಪಾತ್ರದಲ್ಲಿ ಮಿಂಚಿದ್ದು, ತಮಿಳಿನ ‘ಕೊಚಾಡಿಯನ್’, ‘ಕಾಟ್ರು ವೆಳಿಯಿಡೈ’ ಸೇರಿದಂತೆ ಹಿಂದಿಯ ‘ಶಮಿತಾಭ್’ ಸಿನಿಮಾಗಳಲ್ಲೂ ನಟನೆ ಮಾಡಿದ್ದಾರೆ.