ಬೆಂಗಳೂರು, ಮೇ 16:
ಹಳೆಯ ಪ್ರಕರಣವೊಂದು ಬೆನ್ನು ಹಿಡಿದು, ಯಲಹಂಕ ಪೊಲೀಸರು ಮುಂಬೈನಿಂದ ಬಂದಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಮುಂಬೈನ ಜೇಮ್ಸ್ ಜೆಪ್ರಿನ್ ಹಾಗೂ ಆತನ ಸಹಚರ ಸಲಾವುದ್ದಿನ್ ಎಂದು ಗುರುತಿಸಲಾಗಿದೆ.
ಈ ಪ್ರಕರಣ 2024ರಲ್ಲಿ ಯಲಹಂಕದ ಪ್ರಕೃತಿ ನಗರದಲ್ಲಿಯ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಪಟ್ಟಿದೆ. ಆರೋಪಿಗಳು ಟಿಪ್ ಟಾಪ್ ಆಗಿ ಸ್ಮಾರ್ಟ್ ಲುಕ್‌ನಲ್ಲಿ ಕಾರಿನಲ್ಲಿ ಬಂದು, ಸ್ನೇಹಿತರನ್ನು ಭೇಟಿ ಮಾಡುವ ನೆಪದಲ್ಲಿ ಅಪಾರ್ಟ್‌ಮೆಂಟ್‌ಗೆ ಎಂಟ್ರಿಯಾಗುತ್ತಿದ್ದರು. ಬೀಗ ಹಾಕಿದ ಪ್ಲಾಟ್‌ಗಳನ್ನು ಗುರುತಿಸಿ, ಆವರು ತಕ್ಷಣವೇ ಕಳ್ಳತನ ನಡೆಸುತ್ತಿದ್ದರು.
ಕಳ್ಳತನದ ಬಳಿಕ ಕಾರಿನಲ್ಲಿ ಏರಿದೇ ಮುಂಬೈಗೆ ಮರಳುತ್ತಿದ್ದ ಆರೋಪಿಗಳು, ಅಲ್ಲಿಯೇ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದರು. ಇದೇ ರೀತಿಯ ಕೃತ್ಯವನ್ನು ಮುಂಬೈನ ಹಲವು ಭಾಗಗಳಲ್ಲಿ ಕೂಡ ಮಾಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಬಂಧಿತ ಜೇಮ್ಸ್ ಜೆಪ್ರಿನ್ ವಿರುದ್ಧ ಕ್ರಿಮಿನಲ್ ಇತಿಹಾಸವಿದ್ದು, 2005ರಲ್ಲಿ ಮುಂಬೈ ಪೊಲೀಸರ ಮೇಲೆ ಗನ್ ಫೈರ್ ನಡೆಸಿದ್ದನು. ಈತನನ್ನು ‘ಕುಖ್ಯಾತ ಮನೆಕಳ್ಳ’ ಎಂದು ಗುರುತಿಸಲಾಗಿದ್ದು, ಇದೀಗ ಬೆಂಗಳೂರಿಗೂ ಕಾಲಿಟ್ಟಿದ್ದನು.
ಪೊಲೀಸರು ಆರೋಪಿಗಳನ್ನು ಬಂಧಿಸಿ, 180 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಈ ಯಶಸ್ವಿ ಕಾರ್ಯಚರಣೆಗಾಗಿ ಯಲಹಂಕ ಪೊಲೀಸರು ಪ್ರಶಂಸೆಗೆ ಪಾತ್ರರಾಗಿದ್ದಾರೆ.