ಬೇಗೂರು: ಸಾಮಾನ್ಯವಾಗಿ ಕಳ್ಳತನವೆಂದರೆ ಸ್ವಾರ್ಥಕ್ಕಾಗಿ, ಐಷಾರಾಮಿ ಜೀವನಕ್ಕಾಗಿ ಅಥವಾ ಸಾಲ ತೀರಿಸಲು ಮಾಡುವುದು. ಆದರೆ ಇಲ್ಲೊಬ್ಬ ಕಳ್ಳ ತನ್ನ ಸ್ನೇಹಿತರ ಮಕ್ಕಳ ಶಿಕ್ಷಣಕ್ಕಾಗಿ ಕಳ್ಳತನ ಮಾಡಿದ ಅಪರೂಪದ ಘಟನೆ ಬೇಗೂರಿನಲ್ಲಿ ನಡೆದಿದೆ.
ಬೇಗೂರು ನಿವಾಸಿಯಾದ ಶಿವು ಎಂಬಾತ, ಜೀವನದಲ್ಲಿ ಬೇಸತ್ತು ಆತ್ಮಹತ್ಯೆಗೆ ಯೋಜನೆ ಹಾಕಿದ್ದ. ಆದರೆ, ತನ್ನ ಏರಿಯಾದ ಸ್ನೇಹಿತರ ಮಕ್ಕಳು ಶಾಲಾ ಶುಲ್ಕ ಕಟ್ಟಲಾಗದೆ ಪರದಾಡುತ್ತಿರುವುದನ್ನು ಕಂಡು, ಶಿವು ಕಳ್ಳತನದ ದಾರಿಯನ್ನೇ ಆಯ್ಕೆ ಮಾಡಿದ. ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿ, ಚಿನ್ನಾಭರಣಗಳನ್ನು ಸ್ನೇಹಿತರಾದ ಅನಿಲ್ (ಜಗ್ಗ) ಮತ್ತು ವಿವೇಕ್‌ಗೆ ನೀಡಿದ. ಇವರು ತಮಿಳುನಾಡಿನಲ್ಲಿ ಚಿನ್ನವನ್ನು 22 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ.
ಈ ಹಣದಿಂದ ಶಿವು, ವಿವೇಕ್‌ಗೆ 4 ಲಕ್ಷ ರೂ. ನೀಡಿದ್ದಾನೆ. ಅನಿಲ್‌ಗೆ 4 ಲಕ್ಷ ರೂ. ಕೊಟ್ಟು ಆಟೋ ಖರೀದಿಸಿದ. ಉಳಿದ 14 ಲಕ್ಷ ರೂ.ನಿಂದ ತನ್ನ ಏರಿಯಾದ ಸುಮಾರು 20 ಮಕ್ಕಳ ಶಾಲಾ ಮತ್ತು ಕಾಲೇಜು ಶುಲ್ಕವನ್ನು ಕಟ್ಟಿದ್ದಾನೆ.
ಆದರೆ, ಕಾನೂನಿನ ಕೈಗೆ ಶಿವು ಸಿಕ್ಕಿಬಿದ್ದಿದ್ದಾನೆ. ಬ್ಯಾಡರಹಳ್ಳಿ ಪೊಲೀಸರು ಶಿವು, ಅನಿಲ್ ಮತ್ತು ವಿವೇಕ್‌ನನ್ನು ಬಂಧಿಸಿದ್ದಾರೆ. ಮಾರಾಟವಾದ 24 ಲಕ್ಷ ರೂ. ಮೌಲ್ಯದ 260 ಗ್ರಾಂ ಚಿನ್ನದ ಒಡವೆಗಳು ಮತ್ತು ಒಂದು ಆಟೋವನ್ನು ವಶಪಡಿಸಿಕೊಂಡಿದ್ದಾರೆ.
ಒಬ್ಬರಿಗೆ ಒಳ್ಳೆಯದು ಮಾಡುವ ಉದ್ದೇಶದಿಂದ ಇನ್ನೊಬ್ಬರ ಮನೆಯನ್ನು ಹಾಳುಮಾಡಿದ ಶಿವುಗೆ ಖಾಕಿ ಕೈಕೋಳ ತಪ್ಪಿಲ್ಲ. ಸದ್ಯ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.