ಬೆಂಗಳೂರು: ರಾಜ್ಯದ ಅಭಿವೃದ್ಧಿಯನ್ನು ಪಾರದರ್ಶಕವಾಗಿ ಜನತೆಗೆ ತಿಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕರ್ನಾಟಕ ಪ್ರಗತಿ ಪೋರ್ಟಲ್’ (ಡ್ಯಾಶ್‌ಬೋರ್ಡ್) ಅನ್ನು ಶುಕ್ರವಾರ ಬಿಡುಗಡೆಗೊಳಿಸಿದರು. ಈ ತಂತ್ರಾಂಶವು ರಾಜ್ಯದ ಹಣಕಾಸು ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ, ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುವ ಗುರಿಯನ್ನು ಹೊಂದಿದೆ.
ಪೋರ್ಟಲ್‌ನ ಮೂಲಕ ರಾಜ್ಯದ ಪ್ರಗತಿ ಸೂಚ್ಯಂಕಗಳನ್ನು ಪ್ರತಿ ಕ್ಷಣ ಜನರಿಗೆ ಪಾರದರ್ಶಕವಾಗಿ ತಿಳಿಸಲಾಗುತ್ತದೆ. ಮಹಾತ್ಮ ಗಾಂಧಿಯವರ “ಆಡಳಿತವು ಅಂತಿಮ ವ್ಯಕ್ತಿಯ ಕಣ್ಣೀರು ಒರೆಸಬೇಕು” ಎಂಬ ತತ್ವವನ್ನು ಮುನ್ನಿಟ್ಟುಕೊಂಡು, ಸರ್ಕಾರವು ಮಹತ್ವಾಕಾಂಕ್ಷೆಯ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ಇದರಿಂದಾಗಿ ರಾಜ್ಯವು ಎಲ್ಲ ವಲಯಗಳಲ್ಲಿಯೂ ಉತ್ತಮ ಸಾಧನೆ ದಾಖಲಿಸಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಹೇಳಿಕೆ ತಿಳಿಸಿದೆ.
ರಾಜ್ಯಕ್ಕೆ ಖಾಸಗಿ ಬಂಡವಾಳ ದಾಖಲೆ ಪ್ರಮಾಣದಲ್ಲಿ ಹರಿದು ಬರುತ್ತಿದ್ದು, ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಿಂದಾಗಿ ಆರ್ಥಿಕ ಅಸಮಾನತೆಯ ತೀವ್ರತೆ ಕಡಿಮೆಯಾಗುತ್ತಿದೆ. ಜನಸ್ನೇಹಿ ಆಡಳಿತಕ್ಕಾಗಿ ಸಮಯಬದ್ಧ ಸೇವೆಗಳು, ಸಾರ್ವಜನಿಕ ಕುಂದು-ಕೊರತೆಗಳ ನಿರ್ವಹಣೆ, ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಒದಗಿಸುವಿಕೆಯ ಜೊತೆಗೆ, ಉದ್ಯೋಗ ಸೃಷ್ಟಿ ಮತ್ತು ವಿಶೇಷವಾಗಿ ಐದು ಗ್ಯಾರಂಟಿ ಯೋಜನೆಗಳ ಆರ್ಥಿಕ ಹಾಗೂ ಭೌತಿಕ ವಿವರಗಳನ್ನು ಈ ಪೋರ್ಟಲ್‌ನಲ್ಲಿ ಒಂದೇ ವೇದಿಕೆಯಲ್ಲಿ ಲಭ್ಯಗೊಳಿಸಲಾಗಿದೆ.
ಇದಲ್ಲದೆ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ವೇಗವಾಗಿ ವಿಲೇವಾರಿ ಮಾಡುವ ಮೂಲಕ ನಾಗರಿಕರಿಗೆ ತುರ್ತು ಕಾನೂನಾತ್ಮಕ ಪರಿಹಾರ ಒದಗಿಸುವಲ್ಲಿ ಕರ್ನಾಟಕ ಅಗ್ರಗಣ್ಯ ಸ್ಥಾನದಲ್ಲಿದೆ. ಈ ಎಲ್ಲ ಸಾಧನೆಗಳನ್ನು ‘ಕರ್ನಾಟಕ ಪ್ರಗತಿ ಪೋರ್ಟಲ್’ ಮೂಲಕ ಜನರಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ.
ಈ ಕಾರ್ಯಕ್ರಮವು ರಾಜ್ಯ ಸರ್ಕಾರದ ಪಾರದರ್ಶಕತೆ ಮತ್ತು ಜನಕೇಂದ್ರಿತ ಆಡಳಿತದ ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ಪೋರ್ಟಲ್‌ನ ಮೂಲಕ ರಾಜ್ಯದ ಪ್ರಗತಿಯ ಚಿತ್ರಣವನ್ನು ಜನಸಾಮಾನ್ಯರಿಗೆ ಸುಲಭವಾಗಿ ತಿಳಿಯುವಂತೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.