ಬೆಂಗಳೂರು, ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯೆನೆಪೋಯ ವಿಶ್ವವಿದ್ಯಾಲಯ, ಮಂಗಳೂರು ಇವರ ಸಹಯೋಗದೊಂದಿಗೆ 2025ನೇ ಜೂನ್ 04 ರಿಂದ 06 ವರೆಗೆ ಮಂಗಳೂರಿನ ಯೆಂಡುರನ್ಸ್ ಜೋನ್, ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯದಿಂದ ಮೊದಲ ಬಾರಿಗೆ “ಅಂತರರಾಷ್ಟ್ರೀಯ ಯುವ ಶೃಂಗ ಸಭೆ – 2025” (Global Youth Summit: 2025) ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಜೂನ್ 04 ರಂದು ಸಂಜೆ 5:30 ಗಂಟೆಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರ ಉಪಸ್ಥಿತಿಯಲ್ಲಿ ಕರ್ನಾಟಕ ವಿಧಾನಸಭೆಯ ಸಭಾಪತಿಗಳಾದ ಯು.ಟಿ. ಖಾದರ್ ಫರೀದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿಗಳು, ಆಯುಕ್ತರು ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದಿಂದ ಹಾಗೂ 17 ವಿವಿಧ ರಾಷ್ಟ್ರಗಳಿಂದ ಒಟ್ಟು 650ಕ್ಕೂ ಹೆಚ್ಚು ಯುವ ಪ್ರತಿನಿಧಿಗಳು ಮತ್ತು 5 ರಾಷ್ಟ್ರಗಳಿಂದ ಭಾಷಣಕಾರರು ಭಾಗವಹಿಸಲಿದ್ದಾರೆ.
ಈ ಶೃಂಗ ಸಭೆಯು ಸಮಾಜದ ಮೇಲೆ ಉತ್ತಮ ಪರಿಣಾಮ ಬೀರುವ ವಿಷಯಗಳ ಕುರಿತು ಚರ್ಚೆ ಮತ್ತು ವಿಚಾರ ವಿನಿಮಯಕ್ಕೆ ಒಂದು ಪ್ರಮುಖ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.