ಬೆಂಗಳೂರು: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ದುರ್ಘಟನೆಯಲ್ಲಿ 11 ಜನರ ಸಾವಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ವಿಧಾನಸಭೆಯ ಪ್ರತಿಪಕ್ಷ ನಾಯಕರ ಕೊಠಡಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ), ಆರ್‌ಸಿಬಿ, ಮತ್ತು ಏಜೆನ್ಸಿಯಾದ ಡಿಎನ್‌ಎಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ. “ಸ್ವತಃ ಮುಖ್ಯಮಂತ್ರಿಗಳೇ ಆರೋಪಿ ನಂಬರ್ 1, ಉಪ ಮುಖ್ಯಮಂತ್ರಿಗಳು ಆರೋಪಿ ನಂಬರ್ 2, ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಆರೋಪಿ ನಂಬರ್ 3,” ಎಂದು ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯ ಹೈಕೋರ್ಟ್ ಸ್ವಯಂಪ್ರೇರಿತ ಕೇಸ್ ತೆಗೆದುಕೊಂಡು ಸರಕಾರಕ್ಕೆ ಛೀಮಾರಿ ಹಾಕಿದ ನಂತರವೇ ಎಫ್‌ಐಆರ್ ದಾಖಲಾಗಿದೆ ಎಂದು ವಿಜಯೇಂದ್ರ ಟೀಕಿಸಿದರು. “ಮುಖ್ಯಮಂತ್ರಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸರನ್ನು ಹರಕೆಯ ಕುರಿಯನ್ನಾಗಿ ಮಾಡಿದ್ದಾರೆ. ಐನೀವರದೇ ಜವಾಬ್ದಾರಿಯನ್ನು ಒಪ್ಪಿಕೊಂಡು, ಸಿಎಂ, ಡಿಸಿಎಂ, ಮತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು,” ಎಂದು ಒತ್ತಾಯಿಸಿದರು.

ಪೊಲೀಸರ ಅಮಾನತು: ತಪ್ಪು ಮುಚ್ಚಿಕೊಳ್ಳುವ ಷಡ್ಯಂತ್ರ?
ಮುಖ್ಯಮಂತ್ರಿಗಳು ರಾತ್ರಿಯೇ ಪತ್ರಿಕಾಗೋಷ್ಠಿ ನಡೆಸಿ ಬೆಂಗಳೂರು ಕಮಿಷನರ್ ಸೇರಿ ಐದು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. “ಇದು ತಮ್ಮ ತಪ್ಪನ್ನು ಮರೆಮಾಚಲು ಮಾಡಿದ ಷಡ್ಯಂತ್ರ. ಬೇಹುಗಾರಿಕಾ ದಳದ ಅಧಿಕಾರಿಗಳನ್ನು ಯಾಕೆ ಅಮಾನತು ಮಾಡಿಲ್ಲ? ಏಕೆಂದರೆ ಅವರು ನೇರವಾಗಿ ಸಿಎಂಗೆ ವರದಿ ಮಾಡುತ್ತಾರೆ. ಅವರನ್ನು ಅಮಾನತು ಮಾಡಿದರೆ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲೆ ಬೀಳುತ್ತದೆ,” ಎಂದು ವಿಜಯೇಂದ್ರ ಆರೋಪಿಸಿದರು.
“30-40 ಸಾವಿರ ಜನರು ಬರುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ 2-3 ಲಕ್ಷ ಜನ ಬಂದಿದ್ದಾರೆ ಎಂದು ಮುಖ್ಯಮಂತ್ರಿಗಳೇ ಬೇಹುಗಾರಿಕಾ ದಳದ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ,” ಎಂದು ಅವರು ಸ್ಪಷ್ಟಪಡಿಸಿದರು.
ಪೊಲೀಸರಿಂದ ಅನುಮತಿ ನಿರಾಕರಣೆ
ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಗೆದ್ದಿದ್ದಕ್ಕೆ ಅಭಿನಂದಿಸಲು ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಕೆಎಸ್‌ಸಿಎ, ಆರ್‌ಸಿಬಿ, ಮತ್ತು ಡಿಎನ್‌ಎ ಏಜೆನ್ಸಿಯವರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಸಂಭ್ರಮಾಚರಣೆಗೆ ಅನುಮತಿ ಕೇಳಿದ್ದಾಗ, ಲಕ್ಷಾಂತರ ಜನರು ಆಗಮಿಸುವ ಸಾಧ್ಯತೆಯಿಂದಾಗಿ ಪೊಲೀಸರು ಅನುಮತಿ ನಿರಾಕರಿಸಿದ್ದರು ಎಂದು ವಿಜಯೇಂದ್ರ ತಿಳಿಸಿದರು. “ಅನುಮತಿ ಇಲ್ಲದಿದ್ದರೂ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರೆ. ಇದು ಕಾನೂನುಬಾಹಿರ ಕಾರ್ಯಕ್ರಮವಾಗಿತ್ತು,” ಎಂದು ಆರೋಪಿಸಿದರು.
ಜನರ ಆಕ್ರೋಶ: ಸರಕಾರ ಕಿತ್ತುಹಾಕಿ
“ಇಂದು ಬೆಳಿಗ್ಗೆ ಉಪ್ಪಾರಪೇಟೆ ಬಳಿ ಒಬ್ಬ ಆಟೋ ಚಾಲಕನ ಜೊತೆ ಮಾತನಾಡಿದೆ. 11 ಅಮಾಯಕರ ಸಾವಿಗೆ ಕಾಂಗ್ರೆಸ್ ಸರಕಾರವನ್ನು ಕಿತ್ತುಹಾಕಬೇಕೆಂದು ಜನರ ಆಶಯವಿದೆ,” ಎಂದು ವಿಜಯೇಂದ್ರ ಹೇಳಿದರು. ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಕೂಡ ಈ ಸಂಭ್ರಮಾಚರಣೆಯ ಅಗತ್ಯವಿರಲಿಲ್ಲ ಎಂದು ಪ್ರಶ್ನಿಸಿದ್ದಾರೆ ಎಂದು ಗಮನ ಸೆಳೆದರು.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಸಂಸದ ಎಂ. ಮಲ್ಲೇಶ್ ಬಾಬು, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಹರೀಶ್ ಪೂಂಜಾ ಸೇರಿದಂತೆ ಇತರರು ಉಪಸ್ಥಿತರಿದ್ದರು.