ಬೆಂಗಳೂರು: ಆರ್.ಸಿ.ಬಿ. ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಅಮಾಯಕರ ಸಾವಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರ ತಲೆದಂಡವಾಗದೆ ವಿರಮಿಸುವುದಿಲ್ಲ ಎಂದು ವಿಧಾನಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ರಾಜ್ಯ ಬಿಜೆಪಿ ಅಧ್ಯಕ್ಷರು, ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ನಮ್ಮ ಶಾಸಕರು ವಿರಮಿಸುವ ಪ್ರಶ್ನೆಯೇ ಇಲ್ಲ. ರಾಜ್ಯದ ಗೌರವವನ್ನು ಎತ್ತಿಹಿಡಿಯುವ ಕೆಲಸವನ್ನು ಬಿಜೆಪಿ ಮಾಡಲಿದೆ,” ಎಂದು ಹೇಳಿದರು.
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳು, “ನಾನು ಕೇವಲ ವಿಧಾನಸೌಧವನ್ನು ನೋಡಿಕೊಂಡೆ, ಬೇರೆ ಯಾವುದಕ್ಕೂ ಸಂಬಂಧವಿಲ್ಲ,” ಎಂದು ಹೇಳಿರುವುದನ್ನು ಉಲ್ಲೇಖಿಸಿದ ನಾರಾಯಣಸ್ವಾಮಿ, “ಹಾಗಿದ್ದರೆ ನೀವು ವಿಧಾನಸೌಧಕ್ಕೆ ಮಾತ್ರ ಮುಖ್ಯಮಂತ್ರಿಗಳೇ? ಈ ರಾಜ್ಯಕ್ಕೆ ಮುಖ್ಯಮಂತ್ರಿ ಯಾರು? ಡಿ.ಕೆ. ಶಿವಕುಮಾರ್? ಜಿ. ಪರಮೇಶ್ವರ್? ಅಥವಾ ಮುಖ್ಯ ಕಾರ್ಯದರ್ಶಿಗಳೇ?” ಎಂದು ಪ್ರಶ್ನಿಸಿದರು.
“ನೀವು ಯಾವ ಯೋಗ್ಯತೆಯಿಂದ ಮುಖ್ಯಮಂತ್ರಿ ಎಂದು ಕರೆಸಿಕೊಳ್ಳುತ್ತೀರಿ? 11 ಜನರ ಸಾವಿನ ಪ್ರಕರಣದಲ್ಲಿ ನೀವೇ ಆರೋಪಿಗಳು. ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿಯವರ ಕ್ರೆಡಿಟ್ ವಾರ್‌ನಿಂದ ರಾಜ್ಯ ಕಪ್ಪು ಛಾಯೆಯಲ್ಲಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು. “ನೀವು ರಾಜೀನಾಮೆ ನೀಡಲೇಬೇಕು,” ಎಂದು ಒತ್ತಾಯಿಸಿದರು.
ಇದೇ ವೇಳೆ, ರಾಜ್ಯಪಾಲರ ಆಗಮನದ ಸಂದರ್ಭದಲ್ಲಿ ಸರಕಾರ ಶಿಷ್ಟಾಚಾರ ಉಲ್ಲಂಘಿಸಿದೆ ಎಂದು ಆರೋಪಿಸಿದ ಅವರು, “ಸಾಂವಿಧಾನಿಕ ಶಿಷ್ಟಾಚಾರ ಉಲ್ಲಂಘನೆಗೆ ಸಿಎಂ ಮತ್ತು ಡಿಸಿಎಂ ಕಾರಣರಾಗಿದ್ದಾರೆ. ಡಿಪಿಆರ್ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಎಲ್ಲ ಮಾಹಿತಿಯೂ ಇರಬೇಕಿತ್ತು. ಈ ಬಗ್ಗೆ ತನಿಖೆಯಾಗಬೇಕು,” ಎಂದು ಒತ್ತಾಯಿಸಿದರು.