ಕಲಬುರ್ಗಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರಕಾರವು ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಿ, ಭಾರತವನ್ನು ಉಜ್ವಲ ಭವಿಷ್ಯದತ್ತ ಕೊಂಡೊಯ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಇಂದಿಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಸರಕಾರದ ಅವಧಿಯಲ್ಲಿ ದೇಶವು ಭಾರಿ ಹಗರಣಗಳಿಂದ ಕಂಗೆಟ್ಟಿತ್ತು. ಆದರೆ, ಕಳೆದ 11 ವರ್ಷಗಳಿಂದ ಮೋದಿಯವರ ಸರಕಾರವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಭಾರತವನ್ನು ಸದೃಢವಾಗಿ ಮುನ್ನಡೆಸಿದೆ. 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆಗೊಳ್ಳುವ ವಿಶ್ವಾಸವನ್ನು ಮೋದಿಯವರ ಆಡಳಿತ ನೀಡಿದೆ ಎಂದರು.
ನಕ್ಸಲಿಸಂ, 370ನೇ ವಿಧಿ ರದ್ದತಿಯಿಂದ ಶಾಂತಿ ಸ್ಥಾಪನೆ
ಮೋದಿಯವರ ಆಡಳಿತದಲ್ಲಿ ಆಂತರಿಕ ಭದ್ರತೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿದೆ. 10-15 ವರ್ಷಗಳ ಹಿಂದೆ ಉಗ್ರಗಾಮಿ ಚಟುವಟಿಕೆಗಳು ಮತ್ತು ನಕ್ಸಲಿಸಂ ದೇಶವನ್ನು ಕಾಡಿತ್ತು. ಆದರೆ, ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದಿಟ್ಟ ನಿರ್ಧಾರದಿಂದ ನಕ್ಸಲಿಸಂ ಬಹುತೇಕ ನಿರ್ಮೂಲನೆಯಾಗಿದೆ. 370ನೇ ವಿಧಿಯ ರದ್ದತಿಯಿಂದ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿದ್ದು, ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.
ಯುಪಿಎ ಆಡಳಿತದಲ್ಲಿ ಹಗರಣಗಳ ಜಾಲ
2014ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು 2ಜಿ, ಕಾಮನ್‌ವೆಲ್ತ್ ಗೇಮ್ಸ್, ವಸತಿ ಹಗರಣಗಳಂತಹ 12 ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರದಲ್ಲಿ ತೊಡಗಿತ್ತು. ಇದರಿಂದ ಯುವಜನರಲ್ಲಿ ದೇಶದ ಬಗ್ಗೆ ವಿಶ್ವಾಸ ಕಡಿಮೆಯಾಗಿತ್ತು. ಆದರೆ, ಮೋದಿಯವರ ಆಡಳಿತವು ಭ್ರಷ್ಟಾಚಾರರಹಿತ ಆಡಳಿತ ಸಾಧ್ಯ ಎಂಬುದನ್ನು ಸಾಬೀತುಪಡಿಸಿದೆ ಎಂದು ಅವರು ವಿವರಿಸಿದರು.
ರಾಜ್ಯ ಸರಕಾರದ ವೈಫಲ್ಯ
ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಟೀಕಿಸಿದ ವಿಜಯೇಂದ್ರ, ಕೇಂದ್ರ ಸರಕಾರದ ಯೋಜನೆಗಳಿಗೆ ಕಲ್ಲು ಹಾಕುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದರು. ಜಿಎಸ್‌ಟಿಯಿಂದ ಕರ್ನಾಟಕಕ್ಕೆ 1.12 ಲಕ್ಷ ಕೋಟಿ ರೂ. ಬಂದಿದ್ದು, ರಾಜ್ಯವು ಗರಿಷ್ಠ ಜಿಎಸ್‌ಟಿ ಪಡೆದ ರಾಜ್ಯವಾಗಿದೆ. ಆದರೆ, ಮ್ಯಾಚಿಂಗ್ ಗ್ರಾಂಟ್ ಕೊಡಲು ವಿಫಲವಾಗಿರುವ ರಾಜ್ಯ ಸರಕಾರ, ಕೇಂದ್ರವನ್ನು ದೂಷಿಸುತ್ತಿದೆ ಎಂದು ಆಕ್ಷೇಪಿಸಿದರು.
ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಸಿಎಂ, ಡಿಸಿಎಂ ಕಾರಣ
ಬೆಂಗಳೂರಿನ ಆರ್‌ಸಿಬಿ ವಿಜಯೋತ್ಸವದ ಸಂದರ್ಭದ ಕಾಲ್ತುಳಿತ ದುರಂತಕ್ಕೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳೇ ಕಾರಣ ಎಂದು ವಿಜಯೇಂದ್ರ ಆರೋಪಿಸಿದರು. ಜನಸಂದಣಿ ನಿರ್ವಹಣೆಯಲ್ಲಿ ವಿಫಲವಾದ ರಾಜ್ಯ ಸರಕಾರ, ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವ ಮೂಲಕ ತಪ್ಪು ಮಾಡಿದೆ. ಇದು ಅಕ್ಷಮ್ಯ ಅಪರಾಧ ಎಂದರು.
ಅಹಮದಾಬಾದ್ ವಿಮಾನ ದುರಂತದ ಬಗ್ಗೆ ಪ್ರತಿಕ್ರಿಯೆ
ಅಹಮದಾಬಾದ್ ವಿಮಾನ ದುರಂತದ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು, ತನಿಖೆ ಆರಂಭವಾಗಿದ್ದು, ಬ್ಲ್ಯಾಕ್ ಬಾಕ್ಸ್‌ಗಳು ಸಿಕ್ಕಿವೆ ಎಂದು ತಿಳಿಸಿದರು. ಇಂತಹ ವಿಷಯಗಳಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಗೋಷ್ಠಿಯಲ್ಲಿ ಶಾಸಕ ಡಾ. ಅವಿನಾಶ್ ಜಾಧವ್, ಕಲಬುರ್ಗಿ ನಗರ ಜಿಲ್ಲಾಧ್ಯಕ್ಷ ಚಂದ್ರಕಾಂತ್ ಬಿ. ಪಾಟೀಲ್, ಕಲಬುರ್ಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.