ಹುಬ್ಬಳ್ಳಿ, ಜೂನ್ 30, 2025: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯ ಕುರಿತು ಚರ್ಚೆಗಳು ನಡೆದಿದ್ದು, ಶೀಘ್ರದಲ್ಲೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ತಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನಾಗುವ ಬಗ್ಗೆ ಚರ್ಚೆಯನ್ನು ಅಪ್ರಸ್ತುತ ಎಂದು ಅವರು ತಳ್ಳಿಹಾಕಿದರು.
ಹುಬ್ಬಳ್ಳಿಯಲ್ಲಿ ಇಂದು ನೂತನ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ನೂತನ ಮೇಯರ್ ಮತ್ತು ಉಪಮೇಯರ್‌ಗೆ ಅಭಿನಂದನೆ ಸಲ್ಲಿಸಿ, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ
ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜೋಶಿ, “ಪಾಲಿಕೆಗೆ ನೀಡಬೇಕಾದ ಅನುದಾನವನ್ನು ರಾಜ್ಯ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಕಾಂಗ್ರೆಸ್ ಸರ್ಕಾರ ಮಲತಾಯಿ ಧೋರಣೆಯನ್ನು ಕೈಬಿಟ್ಟು, ಅಗತ್ಯ ಅನುದಾನ ನೀಡದಿದ್ದರೆ, ಈ ಭಾಗದ ಜನರು ನಿಮ್ಮನ್ನು ಮನೆಗೆ ಕಳುಹಿಸುತ್ತಾರೆ” ಎಂದು ಎಚ್ಚರಿಕೆ ನೀಡಿದರು.
“ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಇಂದಿರಾ ಕ್ಯಾಂಟೀನ್‌ಗೂ ಹಣ ಬಿಡುಗಡೆ ಮಾಡಿಲ್ಲ. ಆದರೆ ಕೇಂದ್ರ ಸರ್ಕಾರ ರಾಜ್ಯದ ರೈಲ್ವೆ ಯೋಜನೆಗಳಿಗೆ ವರ್ಷಕ್ಕೆ ಸರಾಸರಿ 8,500 ಕೋಟಿ ರೂಪಾಯಿ ಅನುದಾನ ನೀಡಿದೆ. ಬೆಂಗಳೂರು ಅಭಿವೃದ್ಧಿ ಮತ್ತು ಮೆಟ್ರೋ ಯೋಜನೆಗೂ ಕೇಂದ್ರದಿಂದ ಸಾಕಷ್ಟು ನೆರವು ಸಿಕ್ಕಿದೆ. ಆದರೂ ಕಾಂಗ್ರೆಸ್ ಸರ್ಕಾರದ ಆರ್ಥಿಕ ಸ್ಥಿತಿ ಸರಿಯಿಲ್ಲ ಎಂದು ಅವರದ್ದೇ ಶಾಸಕರು ಒಪ್ಪಿಕೊಳ್ಳುತ್ತಿದ್ದಾರೆ” ಎಂದು ಜೋಶಿ ಟೀಕಿಸಿದರು.
ಸಂತೋಷ್ ಲಾಡ್ ವಿರುದ್ಧ ಲೇವಡಿ
ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿರುದ್ಧವೂ ಜೋಶಿ ವಾಗ್ದಾಳಿ ನಡೆಸಿದರು. “ಹುಬ್ಬಳ್ಳಿ-ಧಾರವಾಡದ ಸಮಸ್ಯೆಗಳ ಬಗ್ಗೆ ಮಾತನಾಡಿದರೆ, ಅವರು ಮೋದಿ ಮತ್ತು ಟ್ರಂಪ್ ಬಗ್ಗೆ ಮಾತನಾಡುತ್ತಾರೆ. ರಸ್ತೆ ರಿಪೇರಿ ಮಾಡಿ ಎಂದರೆ, ಮೋದಿ-ಟ್ರಂಪ್‌ರನ್ನು ಕೇಳಿ ಎಂದು ಉತ್ತರಿಸುತ್ತಾರೆ” ಎಂದು ಲೇವಡಿ ಮಾಡಿದರು.