ಬೆಂಗಳೂರು: ಚಾಮರಾಜಪೇಟೆಯಲ್ಲಿ ಪ್ರೀತಿಯ ಹೆಸರಿನಲ್ಲಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅಕ್ರಮವಾಗಿ ಅಬಾಷನ್ ಮಾಡಿಸಿದ ಆರೋಪದಡಿಯಲ್ಲಿ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರೂ, ಆಸ್ಪತ್ರೆ ಸಿಬ್ಬಂದಿ ಹಾಗೂ ಯುವತಿಯ ತಾಯಿಯ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ಕಳೆದ ಒಂದೂವರೆ ವರ್ಷದಿಂದ ಯುವತಿಗೆ ಪರಿಚಿತನಾಗಿದ್ದ ಆರೋಪಿಯು, ತಾನು ಪ್ರೀತಿಸುವುದಾಗಿ ಯುವತಿಗೆ ತಿಳಿಸಿದ್ದನು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಯುವತಿಯನ್ನು ಕರೆದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯಿಂದ ಯುವತಿ ಗರ್ಭಿಣಿಯಾಗಿದ್ದು, ನಂತರ ಆರೋಪಿಯು ಯುವತಿಯ ತಾಯಿಯ ಜೊತೆಗೂಡಿ ಸುಂಕದಕಟ್ಟೆಯ ಶ್ರೀರಾಮ ಆಸ್ಪತ್ರೆಯಲ್ಲಿ ಕಳೆದ ಮೇ ತಿಂಗಳಲ್ಲಿ ಅಬಾಷನ್ ಮಾಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನೊಂದ ಯುವತಿಯು ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಆರೋಪಿ ಪ್ರಿಯಕರ, ಯುವತಿಯ ತಾಯಿ, ಮತ್ತು ಆಸ್ಪತ್ರೆ ಸಿಬ್ಬಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ, ಪೊಲೀಸರು ಕೇವಲ ಆರೋಪಿ ಪ್ರಿಯಕರನನ್ನು ಮಾತ್ರ ಬಂಧಿಸಿದ್ದು, ಆಸ್ಪತ್ರೆ ಸಿಬ್ಬಂದಿ ಮತ್ತು ಯುವತಿಯ ತಾಯಿಯ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆಕ್ಷೇಪ ಕೇಳಿಬಂದಿದೆ. ಆಸ್ಪತ್ರೆಯವರು ಹಣ ಪಡೆದು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯೂ ಎದ್ದಿದೆ.
ಒಂದೂವರೆ ತಿಂಗಳು ಕಳೆದರೂ ಆಸ್ಪತ್ರೆಯ ವಿರುದ್ಧ ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿದೆಯೇ ಎಂಬ ಗೊಂದಲವೂ ಇದೆ. ಒಬ್ಬ ಆರೋಪಿಯನ್ನು ಬಂಧಿಸಿ ಪೊಲೀಸರು ತಮ್ಮ ಕರ್ತವ್ಯ ಮುಗಿಸಿದ್ದಾರೆಯೇ ಎಂಬ ಆರೋಪಗಳು ಕೇಳಿಬಂದಿವೆ.