ಬೆಂಗಳೂರು: ಕನ್ನಡ ಚಿತ್ರರಂಗದ ದಿಗ್ಗಜ ನಟಿ, ಪದ್ಮಭೂಷಣ ಪುರಸ್ಕೃತೆ ಬಿ. ಸರೋಜಾದೇವಿ ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸರೋಜಾದೇವಿ ಅವರ ಕಲಾತ್ಮಕ ಕೊಡುಗೆಯನ್ನು ಸ್ಮರಿಸಿದರು.
“ಬಿ. ಸರೋಜಾದೇವಿ ಅವರು ತಮ್ಮ ಅಭಿನಯದ ಮೂಲಕ ಕನ್ನಡಿಗರ ಮನೆಮಾತಾಗಿದ್ದವರು. ದಕ್ಷಿಣ ಭಾರತದ ಚಿತ್ರರಂಗಕ್ಕೆ ಅಪಾರ ಗೌರವ ತಂದವರು. ರಾಜಕುಮಾರ್ ಸೇರಿದಂತೆ ದೊಡ್ಡ ದೊಡ್ಡ ನಾಯಕ ನಟರ ಜೊತೆ ಅವರ ಅಭಿನಯ ನೋಡಿದ್ದೇನೆ. ಅವರು ನನಗೆ ಆತ್ಮೀಯರಾಗಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಶಿವಕುಮಾರ್ ತಿಳಿಸಿದರು.
ಶೋಕ ಸಂದೇಶ
ತಮ್ಮ ಶೋಕ ಸಂದೇಶದಲ್ಲಿ ಡಿಸಿಎಂ ಶಿವಕುಮಾರ್, “ಅಭಿನಯ ಸರಸ್ವತಿಯಾಗಿ ಆರು ದಶಕಗಳ ಕಾಲ ಕನ್ನಡ, ತಮಿಳು ಸೇರಿದಂತೆ ವಿವಿಧ ಭಾಷೆಗಳ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ಬಿ. ಸರೋಜಾದೇವಿ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ನಮ್ಮ ಜಿಲ್ಲೆಯ ಮನೆಮಗಳಾಗಿದ್ದ ಅವರು, ‘ಕಿತ್ತೂರು ರಾಣಿ ಚೆನ್ನಮ್ಮ’ ಚಿತ್ರದಲ್ಲಿ ರಾಣಿಯ ಪಾತ್ರಕ್ಕೆ ಅವಿಸ್ಮರಣೀಯ ಜೀವ ತುಂಬಿದರು. ಈ ಪಾತ್ರದಲ್ಲಿ ಅವರನ್ನು ಹೊರತುಪಡಿಸಿ ಬೇರೊಬ್ಬರನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ,” ಎಂದು ಬಣ್ಣಿಸಿದರು.
“ತಮಿಳು ಚಿತ್ರರಂಗವು ಅವರನ್ನು ‘ಕನ್ನಡದ ಸುಂದರಗಿಣಿ’ ಎಂದು ಬಿರುದು ನೀಡಿ ಗೌರವಿಸಿತು. ಕನ್ನಡ ಚಿತ್ರರಂಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಅವರಂತಹ ಹಿರಿಯರ ಮಾರ್ಗದರ್ಶನದ ಅಗತ್ಯವಿತ್ತು. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬವರ್ಗಕ್ಕೆ ಮತ್ತು ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ,” ಎಂದು ಶಿವಕುಮಾರ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.