ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ದಲಿತ ಅಧಿಕಾರಿಗಳಿಗೆ ಬಡ್ತಿ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕೆಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ. ದಲಿತರ ಬಗ್ಗೆ ಮಾತಿನಲ್ಲಿ ಮಾತ್ರ ಕಾಳಜಿ ತೋರದೆ, ಕೆಲಸದಲ್ಲಿ ತೋರಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಸಮುದಾಯದ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಿಗೆ ಬಡ್ತಿ ಮೀಸಲಾತಿ ನೀಡದಿರುವುದನ್ನು ಖಂಡಿಸಿದರು. ಜಾತಿ ಜನಗಣತಿ ಮತ್ತು ಬಡ್ತಿಗೆ ಯಾವ ಸಂಬಂಧ ಇದೆ ಎಂದು ಪ್ರಶ್ನಿಸಿದ ಅವರು, ಬಡ್ತಿ ಮೀಸಲಾತಿ ತಡೆದಿರುವುದೇಕೆ ಎಂದು ಆರೋಪಿಸಿದರು. ಈ ಸಂಬಂಧ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದರು. ಖರ್ಗೆಯವರ ಈ ನಿಲೆಯನ್ನು ಸಂತೋಷದ ಸಂಗತಿಯೆಂದು ಬಣ್ಣಿಸಿದ ಅವರು, ಸರಕಾರ ಈ ಹಿಂದೆ ತಮ್ಮ ಮನವಿಗಳಿಗೆ ಕಿವಿಗೊಡದಿದ್ದರೂ ಖರ್ಗೆಯವರ ಮಾತು ಇದೀಗ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಿದರು.
ದಿನ್ನೂರು ಗ್ರಾಮದ ದಲಿತರಿಗೆ ನ್ಯಾಯ ಕೊಡಿ
ಅವರು ಜುಲೈ 9ರಂದು ಮುಖ್ಯಮಂತ್ರಿಗಳಿಗೆ ಇನ್ನೊಂದು ಪತ್ರ ಬರೆದಿದ್ದು, ಬೆಂಗಳೂರು ನಗರ ಜಿಲ್ಲೆಯ ಪೂರ್ವ ತಾಲ್ಲೂಕು ಬಿದರಳ್ಳಿ ಹೋಬಳಿಯ ಕಾಡುಗೋಡಿ ಗ್ರಾಮದ ಸರ್ವೇ ಸಂಖ್ಯೆ 1ರ 711 ಎಕರೆ ಭೂಮಿಯನ್ನು 1950ರಲ್ಲಿ ದಲಿತರಿಗೆ ಹಂಚಿಕೆ ಮಾಡಲಾಗಿತ್ತು ಎಂದು ಸ್ಮರಿಸಿದರು. ಆಗ ಆ ಭೂಮಿ ಅರಣ್ಯವಾಗಿದ್ದು, ಸರಕಾರದ ಮೂಲಕ ದಲಿತರಿಗೆ 3 ಎಕರೆ, 4 ಎಕರೆ, 5 ಎಕರೆಗಳಂತೆ ವಿತರಣೆ ಮಾಡಲಾಗಿತ್ತು. ಆದರೆ ಈಗ ದಿನ್ನೂರು ಗ್ರಾಮವಾಗಿ ಅಭಿವೃದ್ಧಿಗೊಂಡಿದ್ದು, ಆ ಭೂಮಿಯಲ್ಲಿ ದಲಿತರಿಗೆ ನ್ಯಾಯ ದೊರಕದಿರುವುದಾಗಿ ಆರೋಪಿಸಿದರು.
ಅರಣ್ಯ ಇಲಾಖೆಗೆ 60 ಎಕರೆ, ಕೆಐಎಡಿಬಿಗೆ 153 ಎಕರೆ, ರೈಲ್ವೆಗೆ 228 ಎಕರೆ, ದೇವಸ್ಥಾನಕ್ಕೆ 3 ಎಕರೆ, ಇಂದಿರಾ ಕ್ಯಾಂಟೀನ್‌ಗೆ ಅರ್ಧ ಎಕರೆ, ದಿನ್ನೂರು ಕಾಲೊನಿಗೆ 20 ಎಕರೆ, ರಸ್ತೆಗೆ 13 ಎಕರೆ, ಸ್ಮಶಾನಕ್ಕೆ 2.5 ಎಕರೆ, ಪೊಲೀಸ್ ಠಾಣೆಗೆ 4.5 ಎಕರೆ ಮತ್ತು ಮೆಟ್ರೊಗೆ 45 ಎಕರೆ ಭೂಮಿ ನೀಡಲಾಗಿದೆ. ಆದರೆ ದಲಿತರಿಗೆ ನೀಡಿದ 120-130 ಎಕರೆ ಭೂಮಿಯನ್ನು ಕೆಐಎಡಿಬಿ 30 ವರ್ಷಗಳ ಹಿಂದೆ ವಶಪಡಿಸಿಕೊಂಡಿದ್ದು, ಪ್ರತಿ ಎಕರೆಗೆ 30 ಸಾವಿರ ರೂ. ಪರಿಹಾರ ನೀಡಿದ್ದರೂ ಸಮಸ್ಯೆ ಬಗೆಹರಿಸಿಲ್ಲ ಎಂದು ವಿವರಿಸಿದರು.
ಸರಕಾರದ ವಿರುದ್ಧ ಆರೋಪ
ಕೆಐಎಡಿಬಿ, ರೈಲ್ವೆ, ಮೆಟ್ರೊ ಸೇರಿದಂತೆ ಇತರೆ ಇಲಾಖೆಗಳಿಗೆ ನೀಡಿದ ಭೂಮಿ ವಾಪಸ್ ಪಡೆಯುವ ಬದಲು ದಲಿತರ ಭೂಮಿಯನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂದು ಛಲವಾದಿ ಆರೋಪಿಸಿದರು. ಈ ಸಂಬಂಧ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದರೂ ಉತ್ತರ ಸಿಕ್ಕಿಲ್ಲ ಎಂದು ತಿಳಿಸಿದರು. ದಲಿತ ವಿರೋಧಿ ಎಂದು ಸರಕಾರವನ್ನು ಟೀಕಿಸಿದ ಅವರು, ದಲಿತರ ಜಮೀನು ಕಸಿದುಕೊಂಡು 30 ವರ್ಷದಿಂದ ಟೆಂಟ್ ಹಾಕಿ ಹೋರಾಟ ಮಾಡುತ್ತಿದ್ದಾರೆ ಎಂದು ಸ್ಮರಿಸಿದರು.
ಶಿಷ್ಟಾಚಾರ ಉಲ್ಲಂಘನೆಯ ಆರೋಪ
ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ನೂರಾರು ಪತ್ರ ಬರೆದರೂ ಉತ್ತರ ಸಿಕ್ಕಿಲ್ಲ ಎಂದು ಆಕ್ಷೇಪಿಸಿದ ಅವರು, ಶಿವಮೊಗ್ಗದಲ್ಲಿ ಸಭೆಗೆ ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘಿಸಿದ ಆರೋಪವನ್ನು ಮುಖ್ಯಮಂತ್ರಿ ಮಾಡುತ್ತಿರುವುದನ್ನು ಖಂಡಿಸಿದರು. ವಿಪಕ್ಷ ನಾಯಕನಾಗಿ ಎರಡು ವರ್ಷ ಕಳೆದರೂ ಸರಕಾರಿ ಮನೆ ಸೌಲಭ್ಯ ನೀಡದಿರುವುದನ್ನು ಎತ್ತಿಕೊಂಡ ಅವರು, ಶಿಷ್ಟಾಚಾರ ಪಾಲಿಸದ ಸರಕಾರ ಬೇರೆಯವರನ್ನು ಟೀಕಿಸುವ ಅರ್ಹತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ರೈತಪರ ತೀರ್ಮಾನದಲ್ಲಿ ಪಿತೂರಿ?
ದೇವನಹಳ್ಳಿ ಏರೋಸ್ಪೇಸ್‌ಗೆ ಸಂಬಂಧಿಸಿದ 1,777 ಎಕರೆ ಭೂಮಿ ಅಧಿಸೂಚನೆಯನ್ನು ರದ್ದುಗೊಳಿಸಿರುವುದನ್ನು ರೈತರ 1198 ದಿನಗಳ ಹೋರಾಟದ ಫಲವೆಂದು ಗುರುತಿಸಿದ ಅವರು, ಆದರೆ ಈ ತೀರ್ಮಾನದ ಹಿಂದೆ ಕಮ್ಯುನಿಸ್ಟ್ ಸಂಘಟನೆಗಳಿಗೆ ಓಲೈಸುವ ಪಿತೂರಿ ಇರಬಹುದೆಂದು ಶಂಕೆ ವ್ಯಕ್ತಪಡಿಸಿದರು. ರೈತರ ಫಲವತ್ತಾದ ಭೂಮಿಯನ್ನು ಉಳಿಸಿಕೊಂಡಿದ್ದರಿಂದ ಇದು ಸ್ವಾಗತಾರ್ಹವಾದರೂ, ಬದಲಿ ವ್ಯವಸ್ಥೆಯ ಬಗ್ಗೆ ಸರಕಾರ ಚಿಂತನೆ ನಡೆಸಬೇಕಿತ್ತು ಎಂದು ಸಲಹೆ ನೀಡಿದರು. ಆಂಧ್ರಪ್ರದೇಶದಿಂದ 8,000 ಎಕರೆ ಭೂಮಿ ಸಿಗುವ ಸಾಧ್ಯತೆಯ ಬಗ್ಗೆಯೂ ಗಮನ ಸೆಳೆದರು.