ನವದೆಹಲಿ: ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿ, ತುಮಕೂರು ಮತ್ತು ಹಾಸನ ಜಿಲ್ಲೆಗಳ ತೆಂಗು ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ತೆಂಗಿನ ಬೆಳೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಬಿಳಿ ನೋಣ, ಕಾಂಡ ರಸ ಸೋರುವಿಕೆ ಮತ್ತು ಗ್ಯಾನೋಡರ್ಮದಂತಹ ಕೀಟಗಳು ಮತ್ತು ರೋಗಗಳ ಸಮಸ್ಯೆಯನ್ನು ರೈತರು ತಮ್ಮ ಭೇಟಿಯ ಸಂದರ್ಭದಲ್ಲಿ ಸಚಿವರ ಗಮನಕ್ಕೆ ತಂದಿದ್ದಾರೆ.
ಈ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ಸಲುವಾಗಿ, ವಿಜ್ಞಾನಿಗಳು ಮತ್ತು ಅಧಿಕಾರಿಗಳ ತಂಡವನ್ನು ತುಮಕೂರು ಮತ್ತು ಹಾಸನ ಭಾಗಕ್ಕೆ ನಿಯೋಜಿಸುವಂತೆ ಸಚಿವ ವಿ. ಸೋಮಣ್ಣ ಅವರು ಕೇಂದ್ರ ಕೃಷಿ ಸಚಿವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಿವರಾಜ್ ಸಿಂಗ್ ಚೌಹಾಣ್, ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ತುಮಕೂರಿನಲ್ಲಿ ತೆಂಗಿನಕಾಯಿ ಸಂಶೋಧನಾ ಸಂಸ್ಥೆ ಸ್ಥಾಪನೆಗೆ ಒತ್ತಾಯ
ಭೇಟಿಯ ಸಂದರ್ಭದಲ್ಲಿ, ತುಮಕೂರು ಜಿಲ್ಲೆಯು ತೆಂಗು ಉತ್ಪಾದನೆಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ‘ಕಲ್ಪತರು ನಾಡು’ ಎಂದು ಖ್ಯಾತವಾಗಿರುವ ಬಗ್ಗೆ ಸಚಿವ ಸೋಮಣ್ಣ ಅವರು ಕೇಂದ್ರ ಸಚಿವರ ಗಮನ ಸೆಳೆದಿದ್ದಾರೆ. ತುಮಕೂರಿನ ತಿಟಪೂರಿನಲ್ಲಿ ತೆಂಗಿನಕಾಯಿ ಸಂಶೋಧನಾ ಸಂಸ್ಥೆ ಸ್ಥಾಪಿಸುವ ಅವಶ್ಯಕತೆಯ ಬಗ್ಗೆಯೂ ಅವರು ಪತ್ರದ ಮೂಲಕ ಪ್ರಸ್ತಾಪಿಸಿದ್ದಾರೆ. ಇದು ತುಮಕೂರು ಜಿಲ್ಲೆಯ ತೆಂಗು ಬೆಳೆಗಾರರ ಬಹುದಿನಗಳ ಬೇಡಿಕೆಯಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ರೈತಪರ ನೀತಿ
ಈ ಸಭೆಯಲ್ಲಿ ಭಾರತ ಸರ್ಕಾರದ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಈ ವಿಷಯವನ್ನು ಆಳವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಕೃಷಿ ಸಚಿವರು ಸೂಚಿಸಿದ್ದಾರೆ. ರಾಜ್ಯದ ಪ್ರವಾಸದ ಸಂದರ್ಭದಲ್ಲಿ ರೈತರಿಂದ ಸ್ವೀಕರಿಸಿದ ಮನವಿಗಳ ಆಧಾರದ ಮೇಲೆ, ಸಚಿವ ವಿ. ಸೋಮಣ್ಣ ಅವರು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿ, ಕ್ರಮಕ್ಕೆ ಮುಂದಾಗಿದ್ದಾರೆ.
“ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಸದಾ ಸನ್ನದ್ಧವಾಗಿದೆ. ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ,” ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಈ ಕ್ರಮಗಳು ತುಮಕೂರು ಮತ್ತು ಹಾಸನ ಜಿಲ್ಲೆಗಳ ತೆಂಗು ಬೆಳೆಗಾರರಿಗೆ ದೀರ್ಘಕಾಲೀನ ಪರಿಹಾರವನ್ನು ಒದಗಿಸುವ ನಿರೀಕ್ಷೆಯಿದೆ, ಜೊತೆಗೆ ತೆಂಗಿನಕಾಯಿ ಸಂಶೋಧನೆಗೆ ತುಮಕೂರಿನಲ್ಲಿ ಸಂಸ್ಥೆ ಸ್ಥಾಪನೆಯಾದರೆ, ರೈತರಿಗೆ ಹೆಚ್ಚಿನ ಸೌಲಭ್ಯಗಳು ದೊರೆಯಲಿವೆ.