ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ಮಾತನಾಡುವುದು ಸರಿಯಲ್ಲ; ಎಸ್‌ಐಟಿ ತನಿಖೆಗೆ ಸ್ವಾಗತ
ಬೆಂಗಳೂರು: ಧರ್ಮಸ್ಥಳದ ಬಳಿ ಸಾವಿರಾರು ಶವಗಳು ಸಿಕ್ಕಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿರುವುದನ್ನು ಸ್ವಾಗತಿಸುವ ಜೊತೆಗೆ, ಶ್ರೀ ಮಂಜುನಾಥ ಸ್ವಾಮಿಯ ದೇವಾಲಯದ ಬಗ್ಗೆ ಅಪಪ್ರಚಾರ ಮಾಡುವುದು ತಪ್ಪು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಧರ್ಮಸ್ಥಳದ ಬಳಿ ಸಾವಿರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಅನಾಮಧೇಯ ವ್ಯಕ್ತಿಯೊಬ್ಬ ಆರೋಪಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಎಸ್‌ಐಟಿ ರಚಿಸಿದೆ. ಈ ಪ್ರಕರಣದಲ್ಲಿ ನಿಷ್ಪಕ್ಷ ತನಿಖೆ ನಡೆಯಬೇಕು. ಯಾರನ್ನೂ ಸಿಕ್ಕಿಹಾಕಿಸುವ ಉದ್ದೇಶದಿಂದ ತನಿಖೆ ನಡೆಯಬಾರದು,” ಎಂದು ಒತ್ತಿ ಹೇಳಿದರು.
ದಕ್ಷಿಣ ಭಾರತದ ಪ್ರಮುಖ ಶ್ರದ್ಧಾಕೇಂದ್ರಗಳಾದ ತಿರುಪತಿ ಮತ್ತು ಧರ್ಮಸ್ಥಳವು ಕೋಟ್ಯಂತರ ಹಿಂದೂಗಳ ಭಕ್ತಿಯ ಕೇಂದ್ರಬಿಂದುವಾಗಿವೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಕೆಲವರು ಧರ್ಮಸ್ಥಳದ ಬಗ್ಗೆ ವೀಡಿಯೊಗಳ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರ್.ಅಶೋಕ ಆರೋಪಿಸಿದರು. “ಕೇರಳ ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದೆ. ಆದರೆ, ಶಬರಿಮಲೆ ಅಯ್ಯಪ್ಪ ದೇವಾಲಯದಂತಹ ವಿಷಯಗಳಲ್ಲಿ ಕೇರಳ ಸರ್ಕಾರದ ವರ್ತನೆ ಎಲ್ಲರಿಗೂ ತಿಳಿದಿದೆ. ಕೊಲೆ ಪ್ರಕರಣಗಳಿದ್ದರೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಾರೆ. ಸಾವಿರಾರು ಶವಗಳು ಸಿಕ್ಕಿವೆ ಎಂಬ ಆರೋಪಕ್ಕೆ ಆಧಾರವಿಲ್ಲ. ಕುಟುಂಬದವರು ದೂರು ದಾಖಲಿಸದೇ ಇದ್ದರೆ ಈ ಆರೋಪದ ನಿಜತೆಯ ಬಗ್ಗೆ ಪ್ರಶ್ನೆ ಮೂಡುತ್ತದೆ,” ಎಂದರು.
“ಧಾರ್ಮಿಕ ಕೇಂದ್ರಗಳಾದ ದೇವಾಲಯ, ಚರ್ಚ್, ಅಥವಾ ಮಸೀದಿಗಳ ಬಳಿ ಸಾವು ಸಂಭವಿಸಿದರೆ ಪೊಲೀಸರು ತನಿಖೆ ನಡೆಸುತ್ತಾರೆ. 20 ವರ್ಷಗಳ ನಂತರ ಯಾರಿಗೋ ಈ ಆರೋಪ ಮಾಡುವ ಜ್ಞಾನೋದಯವಾಗಿದ್ದು ಹೇಗೆ? ಒಂದು ಧರ್ಮವನ್ನು ಅಪಮಾನಿಸಲು ಇಂತಹ ವಿವಾದ ಸೃಷ್ಟಿಸುವುದು ಸರಿಯಲ್ಲ. ಈ ಪ್ರಕರಣಕ್ಕೆ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯದೊಂದಿಗೆ ಯಾವುದೇ ಸಂಬಂಧವಿಲ್ಲ. ಆದರೂ ಧಾರ್ಮಿಕ ಕೇಂದ್ರದ ಬಗ್ಗೆ ಪದೇ ಪದೇ ಅಪಪ್ರಚಾರ ಮಾಡಲಾಗುತ್ತಿದೆ,” ಎಂದು ಅವರು ಕಳವಳ ವ್ಯಕ್ತಪಡಿಸಿದರು.
ತಪ್ಪು ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೇ ಹೊರತು, ಇಡೀ ಧಾರ್ಮಿಕ ಸಂಸ್ಥೆಯನ್ನು ಗುರಿಯಾಗಿಸಬಾರದು ಎಂದ ಅಶೋಕ, ಎಸ್‌ಐಟಿ ತಂಡವು ಈ ಪ್ರಕರಣದಲ್ಲಿ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು. “ಇದು ವ್ಯಕ್ತಿಗಳಿಗೆ ಸಂಬಂಧಿಸಿದ ವಿಷಯವೇ ಹೊರತು ಧರ್ಮಸ್ಥಳದ ದೇವಾಲಯಕ್ಕೆ ಸಂಬಂಧಿಸಿದ್ದಲ್ಲ. ಯಾರೂ ದೇವಾಲಯವನ್ನು ಗುರಿಯಾಗಿಸಬಾರದು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೈವಭಕ್ತರು. ಅವರು ದೇವರ ಇಚ್ಛೆಯಂತೆ ನಡೆದುಕೊಳ್ಳಬೇಕು. ಧರ್ಮಸ್ಥಳದ ಬಗ್ಗೆ ಅನಗತ್ಯವಾಗಿ ಮಾತನಾಡುವುದು ಯಾವುದೇ ಸಚಿವರಿಗೆ ಶೋಭೆ ತರುವುದಿಲ್ಲ,” ಎಂದರು.
ಗ್ರೇಟರ್ ಬೆಂಗಳೂರು: ಅಭಿವೃದ್ಧಿಯಿಲ್ಲದೆ ಐದು ಪಾಲಿಕೆ ಪ್ರಸ್ತಾಪ
ಗ್ರೇಟರ್ ಬೆಂಗಳೂರು ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ. ಆದರೆ, ಬೆಂಗಳೂರಿನಲ್ಲಿ ಕಸದ ರಾಶಿ, ಆಸ್ಪತ್ರೆಗಳಲ್ಲಿ ಸಂಬಳ ವಿಳಂಬ, ಶಾಲೆಗಳಲ್ಲಿ ಶಿಕ್ಷಕರ ವಜಾ ಸೇರಿದಂತೆ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ ಎಂದು ಆರ್.ಅಶೋಕ ಟೀಕಿಸಿದರು. “ಇ ಖಾತಾದಿಂದ ನೋಂದಣಿಯೂ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಐದು ಪಾಲಿಕೆಗಳನ್ನು ರಚಿಸುವ ಪ್ರಸ್ತಾಪ ಮಾಡಿದೆ. ಬೆಂಗಳೂರನ್ನು ಹೋಳು ಮಾಡುವ ಈ ಯೋಜನೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಲಿದೆ,” ಎಂದರು.
ಮುಡಾ ಹಗರಣ: ಬಿಜೆಪಿಯ ಹೋರಾಟಕ್ಕೆ ಫಲ
ಮುಡಾ ಹಗರಣದ ವಿರುದ್ಧ ಬಿಜೆಪಿಯ ಹೋರಾಟದ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೇಶನಗಳನ್ನು ವಾಪಸ್ ಮಾಡಿದ್ದಾರೆ. “ತಪ್ಪಾಗಿದೆ ಎಂದು ಒಪ್ಪಿಕೊಂಡು ಈ ಕ್ರಮ ಕೈಗೊಂಡಿದ್ದಾರೆ. ಆದರೆ, ಮುಡಾ ಹಗರಣದ ವಿರುದ್ಧದ ಹೋರಾಟವನ್ನು ಬಿಜೆಪಿ ಮುಂದುವರಿಸಲಿದೆ,” ಎಂದು ಆರ್.ಅಶೋಕ ತಿಳಿಸಿದರು.