ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ನೀರು ಸರಬರಾಜು ಇಲಾಖೆಯಿಂದ ಅನುಷ್ಠಾನಗೊಂಡಿರುವ ಪಾವಗಡ ಬಹುಗ್ರಾಮ ನೀರು ಸರಬರಾಜು ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉದ್ಘಾಟಿಸಿದ್ದಾರೆ. ಈ ಯೋಜನೆಗೆ 2528.63 ಕೋಟಿ ರೂಪಾಯಿ ವೆಚ್ಚವಾಗಿದ್ದು, ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ 1138 ಗ್ರಾಮಗಳು ಹಾಗೂ 2 ಪಟ್ಟಣಗಳ 17.21 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ತುಂಗಭದ್ರಾ ಹಿನ್ನೀರನ್ನು ಬಳಸಿಕೊಂಡು ಈ ಯೋಜನೆಯಡಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಚಿಲಕನಹಟ್ಟಿ ಸೇರಿದಂತೆ 14 ಗ್ರಾಮೀಣ ವಸತಿ ಪ್ರದೇಶಗಳು, ಕೂಡ್ಲಿಗಿ ತಾಲ್ಲೂಕಿನ ಉಜ್ಜಿನಿ ಸೇರಿದಂತೆ 215 ಗ್ರಾಮೀಣ ವಸತಿ ಪ್ರದೇಶಗಳು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣ ಮತ್ತು 132 ಗ್ರಾಮೀಣ ವಸತಿ ಪ್ರದೇಶಗಳು, ಚಳ್ಳಕೆರೆ ತಾಲ್ಲೂಕಿನ 360 ಗ್ರಾಮೀಣ ವಸತಿ ಪ್ರದೇಶಗಳು, ಚಿತ್ರದುರ್ಗ ತಾಲ್ಲೂಕಿನ ತುರವನೂರು ಸೇರಿದಂತೆ 58 ಗ್ರಾಮೀಣ ವಸತಿ ಪ್ರದೇಶಗಳು ಹಾಗೂ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣ ಮತ್ತು 357 ಗ್ರಾಮೀಣ ವಸತಿ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, “ಗ್ರಾಮೀಣ ಭಾಗದ ಜನರಿಗೆ ಅಂತರರಾಷ್ಟ್ರೀಯ ಮಾನದಂಡಗಳಂತೆ ಪ್ರತಿಯೊಬ್ಬರಿಗೆ ದಿನಕ್ಕೆ 55 ಲೀಟರ್ ನೀರು ಮತ್ತು ಪಟ್ಟಣದ ಜನರಿಗೆ ದಿನಕ್ಕೆ 135 ಲೀಟರ್ ನೀರು ಒದಗಿಸಲಾಗುವುದು. ಈ ಯೋಜನೆಯಿಂದ ಒಟ್ಟು 1138 ಗ್ರಾಮಗಳು ಮತ್ತು 2 ಪಟ್ಟಣಗಳ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ” ಎಂದು ಹೇಳಿದರು.
ಈ ಯೋಜನೆಯು ಗ್ರಾಮೀಣ ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.