ಮದ್ದೂರು: “ನನಗೆ ಕನಕಪುರ ಎಷ್ಟು ಮುಖ್ಯವೋ, ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳೂ ಅಷ್ಟೇ ಮುಖ್ಯ. ಶಾಸಕ ಉದಯ್ ಅವರ ಬೆನ್ನಿಗೆ ಸರ್ಕಾರ ನಿಂತಿದ್ದು, ಮದ್ದೂರಿನ ಜನರ ಋಣ ತೀರಿಸಲು 1146 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಮದ್ದೂರಿನಲ್ಲಿ ಸೋಮವಾರ ನಡೆದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನಾವು ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ. ಉದಯ್ ಅವರನ್ನು ಗೆಲ್ಲಿಸಿ, ಜಿಲ್ಲೆಯ 7 ಸ್ಥಾನಗಳಲ್ಲಿ 6ರಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿ, 136 ಸದನ ಸದನದ ಬಲಿಷ್ಠ ಸರ್ಕಾರ ರಚನೆಗೆ ಸಹಕಾರ ನೀಡಿದ ಜನರ ಋಣ ತೀರಿಸಲು ಬಂದಿದ್ದೇವೆ,” ಎಂದು ತಿಳಿಸಿದರು. ನೀರಾವರಿ ಇಲಾಖೆ ಕಚೇರಿ ಆರಂಭಿಸಿ, ಮಳವಳ್ಳಿ ವರೆಗೆ ನೀರು ಹರಿಸುವ ಯೋಜನೆಗೆ 500 ಕೋಟಿ ರೂ. ಮೀಸಲಿಟ್ಟಿದ್ದು, ಚಲುವರಾಯಸ್ವಾಮಿ ಅವರು ರೈತ ಮಕ್ಕಳಿಗಾಗಿ ಕೃಷಿ ವಿಶ್ವವಿದ್ಯಾಲಯ ತರಲು ಶ್ರಮಿಸುತ್ತಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಯ ಫಲ: “ಪಂಚ ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್, 200 ಯೂನಿಟ್ ವಿದ್ಯುತ್, ತಿಂಗಳಿಗೆ 2,000 ರೂ., 10 ಕೆ.ಜಿ. ಅಕ್ಕಿ, ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಇದೇ ರೀತಿ ಸಿ.ಎಂ. ಸಿದ್ದರಾಮಯ್ಯ ಅವರು 4.08 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ 1 ಲಕ್ಷ ಕೋಟಿ ಜನರಿಗೆ ಮೀಸಲಿಟ್ಟಿದ್ದಾರೆ. ರೈತರಿಗೆ ಉಚಿತ ವಿದ್ಯುತ್‌ಗೆ 19,000 ಕೋಟಿ, ಸಮಾಜ ಕಲ್ಯಾಣಕ್ಕೆ 25,000 ಕೋಟಿ, ಪಿಂಚಣಿಗೆ 10,900 ಕೋಟಿ ನೀಡಲಾಗುತ್ತಿದೆ,” ಎಂದು ವಿವರಿಸಿದರು.
ಬಿಜೆಪಿ-ಜೆಡಿಎಸ್‌ಗೆ ಟೀಕೆ: “ಅಧಿಕಾರದಲ್ಲಿದ್ದಾಗ ಯಾವ ಯೋಜನೆ ಜಾರಿಗೆ ತಂದಿದ್ದೀರಾ? ಅಚ್ಛೇದಿನ ಮತ್ತು 15 ಲಕ್ಷ ಖಾತೆಗೆ ಏನಾಯ್ತು ಎಂದು ಕುಮಾರಸ್ವಾಮಿ ಅವರನ್ನು ಕೇಳಿ. ಜೆಡಿಎಸ್ ನಾಯಕರು ಸಮಯ ವ್ಯರ್ಥ ಮಾಡಬೇಡಿ, ಈಗ ಕಾಂಗ್ರೆಸ್ ಕಾಲ,” ಎಂದು ಟೀಕಿಸಿದರು.
ಉದಯ್ ಅವರ ಸೇವೆಗೆ ಶ್ಲಾಘನೆ: “ಉದಯ್ ಅವರು 2 ಕೋಟಿ ರೂ. ಮೌಲ್ಯದ ಆಸ್ತಿ ಕಾಂಗ್ರೆಸ್ ಕಚೇರಿಗೆ ದಾನ ಮಾಡಿದ್ದಾರೆ. ರಾಜ್ಯದಲ್ಲಿ ಆರು ಮಂದಿ ನಾಯಕರು ಇಂತಹ ಸೇವೆ ಸಲ್ಲಿಸಿದ್ದಾರೆ. ಉದಯ್ ಅವರ ಶ್ರಮದಿಂದ ಜನರ ಬದುಕು ಬದಲಾಗುತ್ತಿದೆ,” ಎಂದು ಪ್ರಶಂಸಿಸಿದರು. ಟಿಕೆಟ್ ನೀಡುವ ಮುನ್ನ ಸಮೀಕ್ಷೆಯಲ್ಲಿ ಜನರ ಆಯ್ಕೆಯಂತೆ ಉದಯ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ಸ್ಮರಿಸಿದರು.
ಮದ್ದೂರಿನ ಇತಿಹಾಸ: “ಮದ್ದೂರಿಗೆ ದೊಡ್ಡ ಇತಿಹಾಸವಿದೆ. ಎಸ್.ಎಂ. ಕೃಷ್ಣ ಅವರ ತಂದೆ ಮಲ್ಲಯ್ಯರಿಂದ ಹಿಡಿದು ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯರವರ ಕೊಡುಗೆ ಇದೆ. ಟಿಪ್ಪು ಸುಲ್ತಾನರ ಕಾಲದ ಮದ್ದು ತಯಾರಿಕೆಯಿಂದ ಕೈಗಾರಿಕಾ ಪ್ರದೇಶದವರೆಗೆ ಈ ಭೂಮಿ ಶ್ರೇಷ್ಠ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಚಲುವರಾಯಸ್ವಾಮಿ, ಶಾಸಕ ಉದಯ್ ಸೇರಿದಂತೆ ಹಲವರು ಭಾಗವಹಿಸಿದ್ದರು.