ಬೆಂಗಳೂರು: ಭಾರತದ ಮೊದಲ ಕ್ವಾಂಟಮ್ ಸಮ್ಮೇಳನ “ಕ್ವಾಂಟಮ್ ಇಂಡಿಯಾ ಬೆಂಗಳೂರು-2025” ಜುಲೈ 31ರಿಂದ ಎರಡು ದಿನಗಳ ಕಾಲ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ. ಈ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ಕ್ವಾಂಟಮ್ ರೋಡ್‌ಮ್ಯಾಪ್ ಬಿಡುಗಡೆ ಮಾಡಲಿದ್ದಾರೆ.
ಕ್ವಾಂಟಮ್ ತಂತ್ರಜ್ಞಾನದ ಪರಿಚಯ ಮತ್ತು ಅಳವಡಿಕೆಗಾಗಿ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ಸಮ್ಮೇಳನದಲ್ಲಿ 2016ರ ನೊಬೆಲ್ ಪ್ರಶಸ್ತಿ ವಿಜೇತ ಪ್ರೊ. ಡಂಕನ್ ಹಲ್ದಾನೆ ಮತ್ತು 2004ರ ನೊಬೆಲ್ ಪ್ರಶಸ್ತಿ ವಿಜೇತ ಪ್ರೊ. ಡೇವಿಡ್ ಗ್ರಾಸ್ ಸೇರಿದಂತೆ ವಿಶ್ವದ 8 ರಾಷ್ಟ್ರಗಳ ಕ್ವಾಂಟಮ್ ತಜ್ಞರು ಹಾಗೂ ದೇಶಾದ್ಯಂತ 1000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಅವರು ಈ ಸಮ್ಮೇಳನಕ್ಕಾಗಿ ಹಲವು ಪೂರ್ವಭಾವಿ ಸಭೆಗಳನ್ನು ನಡೆಸಿದ್ದು, ಖಾಸಗಿ ತಂತ್ರಜ್ಞಾನ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು ಮತ್ತು ತಾಂತ್ರಿಕ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ, ಕ್ವಾಂಟಮ್ ತಂತ್ರಜ್ಞಾನವನ್ನು ವಿಶ್ವಕ್ಕೆ ಪರಿಚಯಿಸುವ ಗುರಿಯನ್ನು ಹೊಂದಿದ್ದಾರೆ. ಸಮ್ಮೇಳನದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕೆಸ್ಟೆಪ್ಸ್‌ನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸಚಿವ ಎನ್.ಎಸ್. ಭೋಸರಾಜು ಅವರ ಪ್ರಮುಖ ಗುರಿಯು ಕ್ವಾಂಟಮ್ ತಂತ್ರಜ್ಞಾನವನ್ನು ಸ್ವದೇಶಿಯವಾಗಿ ಅಭಿವೃದ್ಧಿಪಡಿಸುವುದಾಗಿದೆ. ವಿದೇಶಿ ಖಾಸಗಿ ಸಂಸ್ಥೆಗಳ ಮೇಲೆ ಅವಲಂಬಿತರಾಗದೆ, ಸ್ವಾವಲಂಬಿಯಾಗಿ ಈ ತಂತ್ರಜ್ಞಾನವನ್ನು ರೂಪಿಸಿ, ಸರ್ಕಾರಿ ಮತ್ತು ಖಾಸಗಿ ವಲಯಗಳ ಮೂಲಕ ಸೇವಾ, ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳಂತಹ ಸಾರ್ವಜನಿಕ ಕ್ಷೇತ್ರಗಳಿಗೆ ಒದಗಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವುದು ಈ ಸಮ್ಮೇಳನದ ಉದ್ದೇಶವಾಗಿದೆ.