ಬೆಂಗಳೂರು: ವಿಧಾನಸಭೆಯಲ್ಲಿ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ಮೇಲೆ ಮತ್ತು ತಮ್ಮ ಕುಟುಂಬದ ಮೇಲೆ ಹನಿ ಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಬಲವಾದ ಸಾಕ್ಷ್ಯಾಧಾರಗಳಿವೆ ಎಂದೂ ತನಿಖೆಗೆ ಒತ್ತಾಯಿಸಿದ್ದರು. ಆದರೆ, ಈ ಪ್ರಕರಣವೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಇತರ ಪ್ರಕರಣಗಳಂತೆ ತನಿಖೆಯಿಲ್ಲದೆ ಹಳ್ಳ ಹಿಡಿದಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ್, ಸಚಿವ ರಾಜಣ್ಣ ಅವರಿಗೆ ತಮ್ಮ ಆರೋಪ ಸತ್ಯವಾಗಿದ್ದರೆ ಮತ್ತು ಸಾಕ್ಷ್ಯಾಧಾರಗಳು ಬಲವಾಗಿದ್ದರೆ, ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಒತ್ತಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಈ ಆರೋಪ ಸುಳ್ಳಾಗಿದ್ದರೆ, ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸಭೆಯಲ್ಲಿ ಸುಳ್ಳು ಹೇಳಿದ್ದಕ್ಕಾಗಿ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಆರೋಪಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ರಾಜಣ್ಣ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಸರ್ಕಾರದ ಮುಂದಿನ ಕ್ರಮವೇನು ಎಂಬುದು ಕುತೂಹಲ ಕೆರಳಿಸಿದೆ.