ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಅಕ್ರಮದ ಬಗ್ಗೆ “ಮೊಸಳೆ ಕಣ್ಣೀರು” ಸುರಿಸುತ್ತಿದ್ದಾರೆ ಎಂದು ಆರೋಪಿಸಿರುವ ಛಲವಾದಿ ಟಿ. ನಾರಾಯಣಸ್ವಾಮಿ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಮತ್ತು ದಲಿತರಿಗೆ ಆಗಿರುವ ಅನ್ಯಾಯದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿಯವರ ತಾತಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಚುನಾವಣಾ ಅಕ್ರಮ ಸಾಬೀತಾದ ಕಾರಣಕ್ಕೆ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿತರಾಗಿದ್ದರು. ಇಂತಹ ಹಿನ್ನೆಲೆಯಿರುವ ರಾಹುಲ್ ಗಾಂಧಿ ಇಂದು ಮತದಾನದ ಶುದ್ಧತೆಯ ಬಗ್ಗೆ ಮಾತನಾಡುವುದು ವಿಪರ್ಯಾಸ ಎಂದು ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.
“ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ನೆಲಕಚ್ಚಿದೆ. ಕೆಲವೇ ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿರುವ ಕಾಂಗ್ರೆಸ್, ಪ್ರತಿ ಚುನಾವಣೆಯಲ್ಲೂ ದಲಿತ ವಿರೋಧಿ ನಿಲುವು ತಾಳಿದೆ. ‘ಜಾತಿಗಣತಿ’ ಹೆಸರಿನಲ್ಲಿ ಮತಬ್ಯಾಂಕ್ ರಾಜಕೀಯಕ್ಕಾಗಿ ನಾಟಕವಾಡುವ ರಾಹುಲ್ ಗಾಂಧಿಯವರಿಗೆ ದಲಿತರ ಬಗ್ಗೆ ನಿಜವಾದ ಕಾಳಜಿಯಿದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ದಲಿತರಿಗಾಗಿ ಮೀಸಲಿಟ್ಟ SCSP-TSP ಯೋಜನೆಯ 39,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದಾಗ ರಾಹುಲ್ ಗಾಂಧಿ ಮೌನವಾಗಿದ್ದೇಕೆ ಎಂದು ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. “ದಲಿತರ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕತೆ ಇದ್ದರೆ, ಈ ಅನ್ಯಾಯದ ವಿರುದ್ಧ ಯಾಕೆ ಧ್ವನಿಯೆತ್ತಲಿಲ್ಲ? ಇದರ ವಿರುದ್ಧ ಯಾವಾಗ ಪ್ರತಿಭಟನೆ ಮಾಡುತ್ತೀರಿ?” ಎಂದು ಅವರು ಆಗ್ರಹಿಸಿದ್ದಾರೆ.
ಕರ್ನಾಟಕದ ದಲಿತ ಸಮುದಾಯಗಳು ಕಾಂಗ್ರೆಸ್ ಸರ್ಕಾರದ ಈ ಆಕ್ರಮಗಳ ವಿರುದ್ಧ ಧಿಕ್ಕಾರ ವ್ಯಕ್ತಪಡಿಸುತ್ತಿವೆ ಎಂದು ಹೇಳಿರುವ ನಾರಾಯಣಸ್ವಾಮಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು, ಭ್ರಷ್ಟಾಚಾರ ತಾರಕಕ್ಕೇರಿರುವುದು, ಬೆಲೆ ಏರಿಕೆಯಿಂದ ಸಾಮಾನ್ಯ ಜನ ಸಂಕಷ್ಟಕ್ಕೀಡಾಗಿರುವುದು, ಅಪರಾಧ ಕೃತ್ಯಗಳ ಪತ್ತೆಯಲ್ಲಿ ವಿಫಲತೆ, ಅಭಿವೃದ್ಧಿಯ ಶೂನ್ಯತೆ, ಬಡಜನರ ಯೋಜನೆಗಳಿಗೆ ಕತ್ತರಿ, ಮತ್ತು ಗ್ಯಾರಂಟಿಗಳ ಆಸೆ ತೋರಿಸಿ ಜನರನ್ನು ವಂಚಿಸುತ್ತಿರುವುದು ಸೇರಿದಂತೆ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ತೆರೆದಿಟ್ಟಿದ್ದಾರೆ.
“ಚುನಾವಣಾ ಅಕ್ರಮವಾದರೆ ದಾಖಲೆಗಳೊಂದಿಗೆ ನ್ಯಾಯಾಲಯದಲ್ಲಿ ಸಾಬೀತು ಮಾಡಿ. ಆದರೆ, ಸಾಂವಿಧಾನಿಕ ಸಂಸ್ಥೆಗಳನ್ನು ಅವಮಾನಿಸುವುದು ಹೇಗೆ ನ್ಯಾಯಸಮ್ಮತ? ಕಾಂಗ್ರೆಸ್ ಗೆದ್ದರೆ ಪ್ರಜಾಪ್ರಭುತ್ವದ ವಿಜಯ, ಇತರರು ಗೆದ್ದರೆ ಅಕ್ರಮ ಎಂಬ ದ್ವಂದ್ವ ನೀತಿ ಸರಿಯೇ?” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ರೈತ ಆತ್ಮಹತ್ಯೆ, ಬಾಣಂತಿಯರಿಗೆ ಚಿಕಿತ್ಸೆ ಸಿಗದೆ ಮರಣ, ಐಪಿಎಲ್ ಆಚರಣೆಯಲ್ಲಿ ಅಮಾಯಕರ ಬಲಿ, ಡ್ರಗ್ಸ್ ಮಾಫಿಯಾ, ಮತ್ತು ಕಾನೂನು ಸುವ್ಯವಸ್ಥೆಯ ಕುಸಿತದಂತಹ ವಿಷಯಗಳಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದರೂ ರಾಹುಲ್ ಗಾಂಧಿ ಮೌನವಾಗಿದ್ದಾರೆ ಎಂದು ಆರೋಪಿಸಿರುವ ನಾರಾಯಣಸ್ವಾಮಿ, “ಇಂತಹ ಸಂದರ್ಭದಲ್ಲಿ ಕಾಣಿಸದ ರಾಹುಲ್ ಗಾಂಧಿ ಇಂದು ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸಿರುವ ಅವರು, ಮುಖ್ಯಮಂತ್ರಿಗಳ ತವರೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ, ರಾಜಧಾನಿಯಲ್ಲಿ ಭಯೋತ್ಪಾದಕರ ಇರುವಿಕೆ, ಮತ್ತು ಭಯೋತ್ಪಾದನೆಯಂತಹ ಅಪರಾಧಗಳನ್ನು ಪತ್ತೆ ಮಾಡಲು ಹೊರ ರಾಜ್ಯದ ಪೊಲೀಸರನ್ನು ಕರೆಯಬೇಕಾದ ಸ್ಥಿತಿಯನ್ನು ಟೀಕಿಸಿದ್ದಾರೆ. “ಇದು ಕಾಂಗ್ರೆಸ್ ಸರ್ಕಾರದ ಆಡಳಿತದ ದೌರ್ಬಲ್ಯಕ್ಕೆ ಹಿಡಿದ ಕೈಗನ್ನಡಿ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ರಾಜ್ಯದ ಭವಿಷ್ಯವನ್ನು ಕತ್ತಲಗೊಳಿಸಬಹುದು ಎಂದು ಎಚ್ಚರಿಸಿರುವ ನಾರಾಯಣಸ್ವಾಮಿ, ರಾಹುಲ್ ಗಾಂಧಿಯವರ ನಾಟಕೀಯ ಪ್ರತಿಭಟನೆಗಳು ಜನರಿಗೆ ಕೇವಲ ಮನರಂಜನೆಯಾಗಿವೆ ಎಂದು ವ್ಯಂಗ್ಯವಾಡಿದ್ದಾರೆ.