ಬೆಂಗಳೂರು: ಕೇಂದ್ರ ಹಣಕಾಸು ಸೇವೆ ಇಲಾಖೆಯಿಂದ ರಾಷ್ಟ್ರವ್ಯಾಪಿಯಾಗಿ ಆಯೋಜಿತವಾದ ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನ ಕರ್ನಾಟಕದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜುಲೈ 1, 2025ರಿಂದ ಆರಂಭವಾದ ಈ ಅಭಿಯಾನವು ಸೆಪ್ಟೆಂಬರ್ 30, 2025ರವರೆಗೆ ಮೂರು ತಿಂಗಳ ಕಾಲ ನಡೆಯಲಿದೆ.

ಈ ಅಭಿಯಾನದಡಿ, ಉಳಿತಾಯ ಬ್ಯಾಂಕ್ ಖಾತೆದಾರರಿಗೆ ಮರು-ಕೆವೈಸಿ, ಪ್ರಧಾನಮಂತ್ರಿ ಜನಧನ್ ಯೋಜನೆ (ಪಿಎಂಜೆಡಿವೈ) ಅಡಿಯಲ್ಲಿ ಬ್ಯಾಂಕ್ ಖಾತೆ ಇಲ್ಲದ ವಯಸ್ಕರಿಗೆ ಖಾತೆ ತೆರೆಯುವಿಕೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ), ಮತ್ತು ಅಟಲ್ ಪಿಂಚಣಿ ಯೋಜನೆ (ಎಪಿವೈ) ಅಡಿಯಲ್ಲಿ ನೋಂದಣಿ, ಡಿಜಿಟಲ್ ವಂಚನೆ ತಡೆಗಟ್ಟುವಿಕೆಯ ಜಾಗೃತಿ, ಹಕ್ಕು ಪಡೆಯದ ಠೇವಣಿಗಳ ಲಭ್ಯತೆ, ಕುಂದುಕೊರತೆ ಪರಿಹಾರ, ಮತ್ತು ಖಾತೆಗಳಲ್ಲಿ ನಾಮನಿರ್ದೇಶನ ನವೀಕರಣದ ಕುರಿತು ಜನಜಾಗೃತಿ ಚಟುವಟಿಕೆಗಳು ನಡೆಯುತ್ತಿವೆ.
ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಈ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ಇದುವರೆಗೆ 2,824 ಶಿಬಿರಗಳನ್ನು ಆಯೋಜಿಸಲಾಗಿದೆ. ಈ ಶಿಬಿರಗಳ ಮೂಲಕ 31,835 ಪಿಎಂಜೆಡಿವೈ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಜೊತೆಗೆ, ಪಿಎಂಜೆಜೆಬಿವೈಗೆ 68,820, ಪಿಎಂಎಸ್‌ಬಿವೈಗೆ 91,922, ಮತ್ತು ಎಪಿವೈಗೆ 24,220 ಜನರು ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯಾದ್ಯಂತ, ವಿಶೇಷವಾಗಿ ಗ್ರಾಮೀಣ ಭಾಗದ ಜನರಿಂದ ಈ ಯೋಜನೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಬ್ಯಾಂಕುಗಳು ಜನಸುರಕ್ಷಾ ಶಿಬಿರಗಳನ್ನು ಆಯೋಜಿಸುತ್ತಿವೆ. ಕೇಂದ್ರ ಸರ್ಕಾರದ ಈ ಹಣಕಾಸು ಸೇರ್ಪಡೆ ಉಪಕ್ರಮಗಳು ಎಲ್ಲ ವರ್ಗದ ಜನರಿಗೂ ಆರ್ಥಿಕ ಸೇವೆಗಳನ್ನು ಲಭ್ಯವಾಗಿಸುವ ಗುರಿಯನ್ನು ಹೊಂದಿದ್ದು, ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಒತ್ತು ನೀಡುತ್ತವೆ. ಈ ಯೋಜನೆಗಳು ಮುಖ್ಯವಾಹಿನಿಯ ಬ್ಯಾಂಕಿಂಗ್ ವ್ಯಾಪ್ತಿಗೆ ಎಲ್ಲರನ್ನೂ ಕೊಂಡೊಯ್ಯುವುದರ ಜೊತೆಗೆ ಸಮಗ್ರ ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿಯನ್ನು ಬಲಪಡಿಸುತ್ತವೆ.
ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳು, ವಿಶೇಷವಾಗಿ ಆದಿವಾಸಿಗಳು ವಾಸಿಸುವ ಜಿಲ್ಲೆಗಳಲ್ಲಿ ಈ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಯೋಜನೆಗಳು ಜನರ ಜೀವನಕ್ಕೆ ಸುರಕ್ಷತೆಯ ಭರವಸೆ ನೀಡುವುದರ ಜೊತೆಗೆ ಆರ್ಥಿಕ ಸ್ಥಿರತೆಯನ್ನು ಒದಗಿಸುತ್ತವೆ.