ಬೆಂಗಳೂರು: ಕೃಷಿ ಮಾರುಕಟ್ಟೆ ಇಲಾಖೆಯ (ಎಪಿಎಂಸಿ) ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ಮತ್ತು ವಿಳಂಬ ನೀತಿ ಅನುಸರಿಸುವ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶನಿವಾರ ಕೃಷಿ ಮಾರುಕಟ್ಟೆ ಇಲಾಖೆ ಸಭಾಂಗಣದಲ್ಲಿ ನಾಲ್ಕು ಕಂದಾಯ ವಿಭಾಗಗಳ ಎಪಿಎಂಸಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ನಿಗದಿತ ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸದ ಅಧಿಕಾರಿಗಳ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಮೂಲಸೌಕರ್ಯ ನಿರ್ಮಾಣ ಮತ್ತು ಕೋಲ್ಡ್ ಸ್ಟೋರೇಜ್ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದ ಅವರು, ಒಂದು ವಾರದೊಳಗೆ ಮತ್ತೊಂದು ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ನಬಾರ್ಡ್, ಐಆರ್‌ಡಿಎಫ್ ಅನುದಾನದ ವಿವರ ಕೇಳಿದ ಸಚಿವರು
ನಬಾರ್ಡ್ ಮತ್ತು ಐಆರ್‌ಡಿಎಫ್‌ನಿಂದ ಲಭಿಸಿದ ನೆರವು, ಎಪಿಎಂಸಿ ಅನುದಾನದಿಂದ ಕೈಗೊಂಡ ಯೋಜನೆಗಳ ಸ್ಥಿತಿಗತಿ ಮತ್ತು ಅಗತ್ಯವಿಲ್ಲದ ಯೋಜನೆಗಳ ಬಗ್ಗೆ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸಚಿವರು ಆದೇಶಿಸಿದರು. ಏಳು ಹೊಸ ಎಪಿಎಂಸಿಗಳು ಅಸ್ತಿತ್ವಕ್ಕೆ ಬಂದಿವೆಯಾದರೂ, ಇತರ ಎಪಿಎಂಸಿಗಳಲ್ಲಿ ಮೂಲಸೌಕರ್ಯ ನಿರ್ಮಾಣ ಏಕೆ ಆಗಿಲ್ಲ ಎಂದು ಪ್ರಶ್ನಿಸಿದ ಅವರು, ರಸ್ತೆ, ಚರಂಡಿ, ಮತ್ತು ಫ್ಲಾಟ್‌ಫಾರ್ಮ್‌ಗಳ ಕೊರತೆ ಇರುವ ಕಡೆಗಳ ವಿವರವನ್ನು ಕೋರಿದರು.
ಮಳೆಗಾಲವನ್ನು ನೆಪವಾಗಿಟ್ಟುಕೊಳ್ಳಬೇಡಿ
ಕಾಂಕ್ರೀಟ್ ರಸ್ತೆಗಳ ನಿರ್ಮಾಣವನ್ನು ಮಳೆಗಾಲದಲ್ಲಿ ಕೈಗೊಳ್ಳುವುದು ಸೂಕ್ತ ಎಂದ ಸಚಿವರು, ವಿಳಂಬಕ್ಕೆ ಮಳೆಗಾಲವನ್ನು ನೆಪವಾಗಿಟ್ಟುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು. ಅನುದಾನ ಲಭ್ಯವಿದೆ ಎಂಬ ಕಾರಣಕ್ಕೆ ಅನಗತ್ಯ ಗೋಡೌನ್‌ಗಳನ್ನು ನಿರ್ಮಿಸಬಾರದು ಎಂದ ಅವರು, ಬಹುತೇಕ ಎಪಿಎಂಸಿಗಳಲ್ಲಿ ಗೋಡೌನ್‌ಗಳು ಖಾಲಿಯಾಗಿದ್ದು, ಕಡಿಮೆ ಬಾಡಿಗೆಗೆ ನೀಡಲಾಗುತ್ತಿದೆ ಎಂದು ಗಮನ ಸೆಳೆದರು. ಅಗತ್ಯವಿರುವ ಕಾಮಗಾರಿಗಳಿಗೆ ಮಾತ್ರ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಅನಗತ್ಯ ಯೋಜನೆಗಳ ಸ್ಥಗಿತಕ್ಕೆ ಸೂಚನೆ
ಎಲ್ಲ ವಿಭಾಗಗಳಲ್ಲಿ ಯಾವೆಲ್ಲ ಯೋಜನೆಗಳಿಗೆ ಅನುಮೋದನೆ ದೊರಕಿದೆ, ಎಷ್ಟು ಟೆಂಡರ್‌ಗಳನ್ನು ಕರೆಯಲಾಗಿದೆ ಎಂಬ ವಿವರವನ್ನು ವರದಿಯಾಗಿ ಸಲ್ಲಿಸುವಂತೆ ತಿಳಿಸಿದ ಸಚಿವರು, ಅನಗತ್ಯ ಎಂದು ಕಂಡುಬಂದ ಯೋಜನೆಗಳನ್ನು ಸ್ಥಗಿತಗೊಳಿಸಲು ಸೂಚಿಸಿದರು. ಒಂದು ವೇಳೆ ಟೆಂಡರ್ ಆಗಿದ್ದರೆ ಮಾತ್ರ ಆ ಕಾಮಗಾರಿಯನ್ನು ಮುಂದುವರಿಸಬೇಕು ಎಂದು ಸ್ಪಷ್ಟಪಡಿಸಿದರು.
ಆಸ್ತಿ ಸಂರಕ್ಷಣೆಗೆ ಒತ್ತು
ಎಪಿಎಂಸಿಗಳ ಆಸ್ತಿಯ ರಕ್ಷಣೆಯ ಜವಾಬ್ದಾರಿ ಅಧಿಕಾರಿಗಳದ್ದೇ ಎಂದು ಒತ್ತಿ ಹೇಳಿದ ಸಚಿವರು, ನಿರ್ವಹಣೆ ಕೊರತೆಯಿಂದ ಅನೇಕ ಕಟ್ಟಡಗಳು ಹಾಳಾಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ತಾವೇ ಎಪಿಎಂಸಿಗಳಿಗೆ ಭೇಟಿ ನೀಡಿ ಲೋಪಗಳನ್ನು ಗುರುತಿಸಿ ಸೂಚನೆ ನೀಡಿದ್ದೇನೆ ಎಂದ ಅವರು, ಕಟ್ಟಡಗಳ ಸಂರಕ್ಷಣೆಗೆ ಗಮನ ನೀಡುವಂತೆ ತಾಕೀತು ಮಾಡಿದರು.
ಮುಂದಿನ ಸಭೆಗೆ ಸ್ಪಷ್ಟ ವರದಿ ಕಡ್ಡಾಯ
ಮುಂದಿನ ಸಭೆ ವೇಳೆಗೆ ಪ್ರತಿಯೊಂದು ಎಪಿಎಂಸಿಯ ಸಂಪೂರ್ಣ ವರದಿಯನ್ನು ಸಲ್ಲಿಸಬೇಕು ಎಂದ ಸಚಿವರು, ಯಾವ ಕಾಮಗಾರಿಗಳು ಬಾಕಿಯಿವೆ, ವಿಳಂಬದ ಕಾರಣಗಳೇನು, ಇದುವರೆಗೆ ಮೂಲಸೌಕರ್ಯ ಏಕೆ ಸಿದ್ಧವಾಗಿಲ್ಲ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆದೇಶಿಸಿದರು.
ಸಭೆಯಲ್ಲಿ ಹೆಚ್ಚುವರಿ ನಿರ್ದೇಶಕಿ ಪುಷ್ಪಾ, ಜಂಟಿ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಅಧೀಕ್ಷಕ ಅಭಿಯಂತ ರಘುನಂದನ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.












