ನವಲಗುಂದ: ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ತಾಲೂಕುಗಳಲ್ಲಿ ಈ ಬಾರಿಯ ಮುಂಗಾರು ಮಳೆಯಿಂದ ಸುಮಾರು 55 ಸಾವಿರ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. ಈ ಕುರಿತು ರೈತರಿಗೆ ಬೆಳೆಹಾನಿ ಪರಿಹಾರ ನೀಡಲು ಸರ್ಕಾರಕ್ಕೆ ತಕ್ಷಣ ವರದಿ ಸಲ್ಲಿಸುವಂತೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಚಿವರು ಶನಿವಾರ ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಬೆಳೆಹಾನಿ ಮತ್ತು ಮೂಲಸೌಕರ್ಯದ ಕ್ಷತಿಗಳನ್ನು ಪರಿಶೀಲಿಸಿದರು. ನರಗುಂದ-ಗದಗ ರಾಜ್ಯ ಹೆದ್ದಾರಿಯ ತಡಹಾಳದ ಬಳಿಯ ದೊಡ್ಡಹಳ್ಳ ಮತ್ತು ಬೆಣ್ಣಿಹಳ್ಳ ಸೇತುವೆಗಳು ಕೊಚ್ಚಿಹೋಗಿರುವುದನ್ನು ವೀಕ್ಷಿಸಿದ ಅವರು, ತಜ್ಞರೊಂದಿಗೆ ಚರ್ಚಿಸಿ ಸ್ಟೀಲ್ ಬ್ರಿಡ್ಜ್ ಅಥವಾ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರೊಂದಿಗೆ ಚರ್ಚಿಸಿದ್ದಾರೆ. ತಜ್ಞರ ಅಭಿಪ್ರಾಯದ ಆಧಾರದ ಮೇಲೆ ಸೇತುವೆ ದುರಸ್ಥಿಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಸೂಚನೆ ನೀಡಿದರು.
ಮನೆ ಕುಸಿತ: ಪರಿಹಾರ ಘೋಷಣೆ
ನವಲಗುಂದ ನಗರದ ಹುಗ್ಗಿಯಲ್ಲಿ ದ್ಯಾಮವ್ವ ಬನ್ನೆಣ್ಣವರ ಮತ್ತು ಕಳ್ಳಿಮಠ ಮೆಹಬೂಬ್ ನಗರದ ಮೋದಿನಸಾಬ್ ಶಿರಕೋಳ ಅವರ ಮನೆಗಳು ಕುಸಿದಿದ್ದು, ಇವರಿಗೆ ತಲಾ 25 ಸಾವಿರ ರೂ. ವೈಯಕ್ತಿಕ ಪರಿಹಾರ ಮತ್ತು ಸರ್ಕಾರದಿಂದ 1.20 ಲಕ್ಷ ರೂ. ಪರಿಹಾರ ನೀಡಲು ಸಚಿವರು ತಿಳಿಸಿದರು. ಅಣ್ಣಿಗೇರಿ ತಾಲೂಕಿನ ಶಿಶ್ವಿನಹಳ್ಳಿಯಲ್ಲಿ ಮನೆ ಕುಸಿದ ಪ್ರಕರಣದಲ್ಲಿ ಒಂದೇ ರೀತಿಯ ಪರಿಹಾರ ಘೋಷಿಸಲಾಗಿದ್ದು, ಕುಸಿತದಲ್ಲಿ ಸಿಲುಕಿದ ನಾಲ್ವರಿಗೆ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಬೆಳೆಹಾನಿ ವೀಕ್ಷಣೆ
ಶಲವಡಿ ನಾಯಕನೂರ ಗ್ರಾಮದಲ್ಲಿ ಜಮೀನಿನಲ್ಲಿ ಹೆಸರು ಮತ್ತು ಈರುಳ್ಳಿ ಬೆಳೆ ಹಾನಿಯನ್ನು ಸಚಿವರು ಪರಿಶೀಲಿಸಿದರು. ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಕ್ರಾಸ್ ಬಳಿಯ ಶಿರಗುಪ್ಪಿ ಗ್ರಾಮದ ನಿಂಗವ್ವ ತೊಗರಿಮನಿ ಅವರ ಹೊಲದಲ್ಲಿ ಹೆಸರು ಬೆಳೆ ಹಾನಿಯನ್ನು ವೀಕ್ಷಿಸಿ, ತಕ್ಷಣ ವರದಿ ಸಲ್ಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಚಿವ ಸಂತೋಷ್ ಲಾಡ್ ಅವರು, ರೈತರಿಗೆ ತಕ್ಷಣವೇ ಪರಿಹಾರ ಒದಗಿಸಲು ಮತ್ತು ಮೂಲಸೌಕರ್ಯವನ್ನು ದುರಸ್ಥಿಗೊಳಿಸಲು ಸರ್ಕಾರದೊಂದಿಗೆ ಸಮನ್ವಯದಿಂದ ಕೆಲಸ ಮಾಡುವ ಭರವಸೆ ನೀಡಿದರು.