ರಾಯಚೂರು: ರಾಯಚೂರಿನ ಯುವಕ-ಯುವತಿಯರು ತಮ್ಮ ಹುಟ್ಟೂರಿನಲ್ಲಿಯೇ ಶಿಕ್ಷಣ ಪಡೆದು ಉದ್ಯೋಗ ಪಡೆಯಬೇಕೆಂಬ ಕನಸನ್ನು ಹೊಂದಿರುವ ಕಾಂಗ್ರೆಸ್ ರಾಜ್ಯ ಯುವ ಮುಖಂಡ ರವಿ ಬೋಸರಾಜು, 1M1B ಮತ್ತು ಎನ್‌ಎಸ್‌ಬಿ ಫೌಂಡೇಶನ್ ಸಹಯೋಗದಲ್ಲಿ ರಾಯಚೂರಿನಲ್ಲಿ ‘ಕೌಶಲ್ಯಾಭಿವೃದ್ಧಿ ಕೇಂದ್ರ’ ಸ್ಥಾಪಿಸುವ ಚಿಂತನೆಯಲ್ಲಿದ್ದಾರೆ. ಈ ಕೇಂದ್ರವು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ನವೀನ ಕೌಶಲ್ಯಗಳ ತರಬೇತಿ ಮತ್ತು ದೀರ್ಘಕಾಲಿಕ ಉದ್ಯೋಗ ಸಾಮರ್ಥ್ಯವನ್ನು ಬೆಳೆಸಲಿದೆ ಎಂದು ಅವರು ತಿಳಿಸಿದರು.
ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಎನ್‌ಎಸ್‌ಬಿ ಬೋಸರಾಜು ಫೌಂಡೇಶನ್ ಮತ್ತು ಯುನೈಟೆಡ್ ನೇಷನ್ಸ್-ಮಾನ್ಯತೆ ಪಡೆದ 1M1B (One Million for One Billion) ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾದ ಎರಡು ದಿನಗಳ ಔದ್ಯೋಗಿಕ ತರಬೇತಿ ಕಾರ್ಯಗಾರ ಮತ್ತು ಒಂದು ದಿನದ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಯುವಕ-ಯುವತಿಯರು ದೂರದ ಮಹಾನಗರಗಳಿಗೆ ಉದ್ಯೋಗಕ್ಕಾಗಿ ಅಲೆಯುವ ಕಷ್ಟವನ್ನು ತಪ್ಪಿಸಲು ರಾಯಚೂರಿನಲ್ಲಿಯೇ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಈ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕಂಪನಿಗಳಲ್ಲಿ ವಿಶ್ವಾಸಾರ್ಹತೆಯೊಂದಿಗೆ ಕೆಲಸ ಮಾಡಿ, ಉನ್ನತ ಸ್ಥಾನಕ್ಕೇರಬೇಕು” ಎಂದರು.
ಈ ಉದ್ಯೋಗ ಮೇಳವು ಅಪಾರ ಯಶಸ್ಸು ಕಂಡಿದ್ದು, ರಾಯಚೂರು ಮತ್ತು ಸುತ್ತಮುತ್ತಲಿನ ಯುವಜನರಿಗೆ ಕೈಗಾರಿಕಾ ತಜ್ಞರೊಂದಿಗೆ ಸಂವಾದದ ಅವಕಾಶ ಒದಗಿಸಿ, ಅವರ ಪ್ರತಿಭೆಗೆ ತಕ್ಕ ಉದ್ಯೋಗ ದೊರಕಿಸಿದೆ. “ಇದು ಕೇವಲ ಕಾರ್ಯಕ್ರಮವಲ್ಲ, ಯುವಕರ ಭವಿಷ್ಯ ರೂಪಿಸುವ ಮಹತ್ವದ ಹೆಜ್ಜೆ. ಮುಂದಿನ ದಿನಗಳಲ್ಲಿ ಪ್ರತಿವರ್ಷ ಇಂತಹ ಮೇಳಗಳನ್ನು ಆಯೋಜಿಸುವ ಸಂಕಲ್ಪವಿದೆ. ರಾಯಚೂರನ್ನು ಉದ್ಯೋಗಾವಕಾಶಗಳ ಹಬ್ಬವನ್ನಾಗಿಸಿ, ಮುಖ್ಯಮಂತ್ರಿಯವರ ‘ರಾಜ್ಯದಲ್ಲಿಯೇ ಉದ್ಯೋಗ’ ದೃಷ್ಟಿಕೋನಕ್ಕೆ ರೂಪ ನೀಡುವ ಗುರಿಯಿದೆ” ಎಂದು ರವಿ ಬೋಸರಾಜು ಹೇಳಿದರು.
ರಾಯಚೂರಿನ ಗಂಜ್ ಕೃಷಿ ಉತ್ಪನ್ನ ಮಾರುಕಟ್ಟೆ, ಹತ್ತಿ ಮಾರುಕಟ್ಟೆ, ವೈಟಿಪಿಎಸ್, ಆರ್‌ಟಿಪಿಎಸ್‌ನಂತಹ ಕೈಗಾರಿಕೆಗಳಿಂದ ನೂರಾರು ಕೋಟಿ ರೂ. ವ್ಯವಹಾರ ನಡೆಯುತ್ತಿದ್ದರೂ, ಯುವಕರು ಉದ್ಯೋಗಕ್ಕಾಗಿ ಬೇರೆಡೆಗೆ ಹೋಗುವ ಅಗತ್ಯವಿಲ್ಲ. “ಕೌಶಲ್ಯಾಭಿವೃದ್ಧಿ ಕೇಂದ್ರವು ಯುವಕರಿಗೆ ವೃತ್ತಿಪರ ತರಬೇತಿ ಮತ್ತು ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲಿದೆ” ಎಂದು ಅವರು ತಿಳಿಸಿದರು.
1M1B ಸಂಚಾಲಕ ದೀಪಿಕಾ ಮಾತನಾಡಿ, “ಎರಡು ದಿನಗಳ ತರಬೇತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾರೆ. ಒಬ್ಬ ಅಂಗವಿಕಲ ವ್ಯಕ್ತಿ ತನ್ನ ಅಂಗವೈಕಲ್ಯದ ಹೊರತಾಗಿಯೂ ಕೆಲಸ ಮಾಡಲು ಸಿದ್ಧನಿದ್ದಾನೆ ಎಂದು ಕೇಳಿದಾಗ, ನಮ್ಮ ಕಾರ್ಯಕ್ರಮದ ಪ್ರಭಾವವನ್ನು ಕಂಡು ಸಂತೋಷವಾಯಿತು” ಎಂದರು.
ಈ ಕಾರ್ಯಕ್ರಮದಲ್ಲಿ ವೇದಾಂತ ಶಿಕ್ಷಣ ಸಂಸ್ಥೆಯ ರಾಕೇಶ್ ರಾಜಲಬಂಡಿ, ಶಾಹಿನ್ ಕಾಲೇಜಿನ ಸೈಯದ್ ಆದಿಲ್, 1M1B ಸಂಚಾಲಕರಾದ ದೀಪಿಕಾ, ಶೃತಿ, ರಿಸ್ವಾನ್, ಕಾಂಗ್ರೆಸ್ ಮುಖಂಡರಾದ ಜಯವಂತರಾವ್ ಪತಂಗೆ, ನರಸಿಂಹಲು ಮಾಡಗಿರಿ, ಬಿ. ರಮೇಶ್ ತಿಮ್ಮಾರೆಡ್ಡಿ, ತೇಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.