ನವದೆಹಲಿ: ಜಾಗತಿಕ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಭಾರತ ಮತ್ತು ಚೀನಾ ಜಂಟಿಯಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶಾಂತಿಯುತ ಮತ್ತು ಸಮೃದ್ಧ ಜಗತ್ತಿನ ನಿರ್ಮಾಣಕ್ಕೆ ಎರಡೂ ರಾಷ್ಟ್ರಗಳ ನಡುವಿನ ಸಹಕಾರ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
ಇತ್ತೀಚಿನ ಒಂದು ಸಂದರ್ಶನದಲ್ಲಿ ಮಾತನಾಡಿದ ಪ್ರಧಾನ ಮೋದಿ, ಭಾರತ ಮತ್ತು ಚೀನಾ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಿಕೊಂಡು, ಜಾಗತಿಕ ಆರ್ಥಿಕತೆಯ ಸವಾಲುಗಳನ್ನು ಎದುರಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ವಿಶ್ವದ ಎರಡು ದೊಡ್ಡ ಆರ್ಥಿಕ ಶಕ್ತಿಗಳಾದ ಈ ರಾಷ್ಟ್ರಗಳು ಸಹಕಾರದ ಮೂಲಕ ಜಾಗತಿಕ ಸ್ಥಿರತೆಗೆ ಕೊಡುಗೆ ನೀಡಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗಡಿಯಲ್ಲಿನ ಉದ್ವಿಗ್ನತೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಮೂಲಕ ಎರಡೂ ದೇಶಗಳು ಪರಸ್ಪರ ಗೌರವ ಮತ್ತು ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಮೋದಿ ಸಲಹೆ ನೀಡಿದರು. ಈ ದಿಶೆಯಲ್ಲಿ ಚೀನಾದೊಂದಿಗೆ ರಚನಾತ್ಮಕ ಚರ್ಚೆಗಳನ್ನು ಮುಂದುವರಿಸಲು ಭಾರತ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಜಾಗತಿಕ ಆರ್ಥಿಕತೆಯಲ್ಲಿ ಭಾರತ ಮತ್ತು ಚೀನಾದ ಪಾತ್ರವು ದಿನೇ ದಿನೇ ಹೆಚ್ಚುತ್ತಿದ್ದು, ಈ ಎರಡೂ ದೇಶಗಳ ಸಹಕಾರವು ವಿಶ್ವದ ಇತರ ರಾಷ್ಟ್ರಗಳಿಗೂ ಮಾದರಿಯಾಗಬಹುದು ಎಂದು ಪ್ರಧಾನಿ ತಿಳಿಸಿದರು.