ಮಂಗಳೂರು: ಹಿಂದೂ ಶ್ರದ್ಧಾ ಕೇಂದ್ರಗಳ ಮೇಲಿನ ಅಪಮಾನ ಮತ್ತು ಅಪಪ್ರಚಾರವನ್ನು ಬಿಜೆಪಿ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸೆಪ್ಟೆಂಬರ್ 1ರಂದು ನಡೆಯಲಿರುವ “ಧರ್ಮಸ್ಥಳ ಚಲೋ” ಸಮಾವೇಶದ ಮೂಲಕ ರಾಜ್ಯ ಮತ್ತು ದೇಶಕ್ಕೆ ನೀಡಲಾಗುವುದು ಎಂದು ಸಂಸದ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಸನಾತನ ಧರ್ಮದ ಸಂಸ್ಕೃತಿ ಮತ್ತು ಹಿಂದೂ ಶ್ರದ್ಧಾ ಕೇಂದ್ರಗಳ ಜೊತೆಗೆ ದೃಢವಾಗಿ ನಿಂತಿದೆ ಎಂಬುದನ್ನು ತೋರಿಸಲು ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಕು. ಶೋಭಾ ಕರಂದ್ಲಾಜೆ, ಬಿಜೆಪಿ ಕರ್ನಾಟಕ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಮತ್ತು ಲಕ್ಷಾಂತರ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪುಣ್ಯಕ್ಷೇತ್ರದ ವಿರುದ್ಧ ಸುಳ್ಳು ಆರೋಪಗಳು ಮತ್ತು ಅಪಪ್ರಚಾರಗಳು ನಡೆಯುತ್ತಿವೆ. ಯಾವುದೇ ಸಾಕ್ಷ್ಯಾಧಾರವಿಲ್ಲದೆ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಮತ್ತು ಭಕ್ತರ ಭಾವನೆಗಳನ್ನು ಗೌರವಿಸುವ ಉದ್ದೇಶದಿಂದ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ “ಧರ್ಮಸ್ಥಳ ಚಲೋ” ಸಮಾವೇಶ ಆಯೋಜಿಸಲಾಗಿದೆ ಎಂದು ಚೌಟ ಹೇಳಿದರು.
ಬಿಜೆಪಿಯು ಕಾನೂನು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆಯಿಟ್ಟು ಕಾರ್ಯನಿರ್ವಹಿಸುತ್ತದೆ. ಧರ್ಮಸ್ಥಳದ ಎಸ್‌ಐಟಿ ತನಿಖೆಯನ್ನು ಬಿಜೆಪಿ ಸ್ವಾಗತಿಸಿತ್ತಾದರೂ, ತನಿಖೆಯ ದಿಕ್ಕಿನ ಬಗ್ಗೆ ಸಂಶಯಗಳಿವೆ. ಕಮ್ಯುನಿಸ್ಟರು, ಎಸ್‌ಡಿಪಿಐ, ಮತ್ತು ಪಿಎಫ್‌ಐ ಸಂಘಟನೆಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಕಾರಣ, ಈ ವಿಷಯವನ್ನು ಎನ್‌ಐಎಗೆ ವಹಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಷಡ್ಯಂತ್ರಕಾರರ ವಿರುದ್ಧ ಕ್ರಮಕ್ಕೆ ಆಗ್ರಹ: ತಮ್ಮೇಶ್ ಗೌಡ
ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಎಸ್‌ಐಟಿ ತನಿಖೆಯ ದಿಕ್ಕು ಸರಿಯಿಲ್ಲ ಎಂದು ಆಕ್ಷೇಪಿಸಿದ ಅವರು, ಈ ಪ್ರಕರಣ ಕೇರಳ, ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಮತ್ತು ತಮಿಳುನಾಡಿನ ಸಂಸದರ ಭಾಗವಹಿಸುವಿಕೆಯೊಂದಿಗೆ ಚರ್ಚೆಯಾಗುತ್ತಿದೆ ಎಂದು ತಿಳಿಸಿದರು. ಈ ಎಲ್ಲಾ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವು ಅನಾಮಿಕ ವ್ಯಕ್ತಿಯ ಆರೋಪಗಳನ್ನು ಪರಿಶೀಲಿಸದೆ, ಸಾಕ್ಷ್ಯವಿಲ್ಲದೆ ತನಿಖೆಗೆ ಮುಂದಾಗಿದೆ ಎಂದು ಗೌಡ ಆರೋಪಿಸಿದರು. ಧರ್ಮಸ್ಥಳದ ವಿರುದ್ಧ ಸುಳ್ಳು ಆಪಾದನೆ ಮಾಡಿದವರಿಗೆ ರಾಜಮರ್ಯಾದೆ ನೀಡುತ್ತಿರುವ ಎಸ್‌ಐಟಿ ತನಿಖೆಯ ಬಗ್ಗೆ ಸಂಶಯಗಳಿವೆ. ಈ ಪ್ರಕರಣವು ಎಡಪಂಥೀಯರು, ನಗರ ನಕ್ಸಲರು ಮತ್ತು ಅಂತರರಾಷ್ಟ್ರೀಯ ಏಜೆಂಟ್‌ಗಳ ಪ್ರಭಾವದಿಂದ ನಡೆದಿರಬಹುದು ಎಂದು ಎನ್‌ಐಎ ತನಿಖೆಯಿಂದ ಸತ್ಯಾಸತ್ಯತೆ ಬಯಲಾಗಬೇಕೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರ್, ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕೆಡಂಜಿ ಮತ್ತು ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ ಉಪಸ್ಥಿತರಿದ್ದರು.