ಖ್ಯಾತ ನಿರ್ದೇಶಕ ಪಿ.ಸಿ. ಶೇಖರ್ ಅವರ ನಿರ್ದೇಶನದಲ್ಲಿ, ಪ್ರಕಾಶ್ ಬುದ್ದೂರು ಅವರ ಆಕಾಶ್ ಪಿಕ್ಚರ್ಸ್‌ನಡಿ ನಿರ್ಮಾಣವಾಗುತ್ತಿರುವ ‘ಮಹಾನ್’ ಚಿತ್ರದಲ್ಲಿ ‘ನಾಗಿಣಿ’ ಧಾರಾವಾಹಿ ಮತ್ತು ‘ಬಿಗ್ ಬಾಸ್’ ಮೂಲಕ ಜನಮನ ಗೆದ್ದ ನಟಿ ನಮ್ರತಾ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಜನಪ್ರಿಯ ನಟ ವಿಜಯ ರಾಘವೇಂದ್ರ ನಾಯಕನಾಗಿ ನಟಿಸುತ್ತಿದ್ದು, ರಾಧಿಕಾ ಚೇತನ್, ಮಿತ್ರ ಸೇರಿದಂತೆ ಹಲವು ಅನುಭವಿ ಕಲಾವಿದರು ತಾರಾಬಳಗದಲ್ಲಿ ಇದ್ದಾರೆ.
‘ಮಹಾನ್’ ಚಿತ್ರದ ಕುರಿತು ಮಾತನಾಡಿರುವ ನಮ್ರತಾ ಗೌಡ, “ನಾನು ಸಿನಿಮಾದಲ್ಲಿ ನಟಿಸಬೇಕೆಂದು ಸ್ನೇಹಿತರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ಆದರೆ, ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ನಿರ್ದೇಶಕ ಪಿ.ಸಿ. ಶೇಖರ್ ಅವರು ‘ಮಹಾನ್’ ಚಿತ್ರದ ಕಥೆಯನ್ನು ವಿವರಿಸಿದಾಗ, ಅದು ನನ್ನ ಮನಸ್ಸಿಗೆ ತುಂಬಾ ಹತ್ತಿರವಾಯಿತು. ಕಥೆ ಕೇಳಿದ ತಕ್ಷಣವೇ ನಟಿಸಲು ಒಪ್ಪಿಕೊಂಡೆ,” ಎಂದು ತಿಳಿಸಿದ್ದಾರೆ.
ರೈತರ ಬದುಕು ಮತ್ತು ಅವರ ಬವಣೆಗಳ ಸುತ್ತ ಹೆಣೆದಿರುವ ಈ ಚಿತ್ರದ ಕಥಾಹಂದರವು ನೈಜತೆಗೆ ಹತ್ತಿರವಾಗಿದೆ ಎಂದು ನಮ್ರತಾ ಹೇಳಿದ್ದಾರೆ. “ನಿರ್ಮಾಪಕ ಪ್ರಕಾಶ್ ಬುದ್ದೂರು ಅವರು ಯಾವುದೇ ಕೊರತೆಯಿಲ್ಲದಂತೆ ಚಿತ್ರವನ್ನು ಭವ್ಯವಾಗಿ ನಿರ್ಮಾಣ ಮಾಡುತ್ತಿದ್ದಾರೆ. ಸದಭಿರುಚಿಯ ಚಿತ್ರಗಳನ್ನು ಚಿತ್ರರಂಗಕ್ಕೆ ನೀಡಿರುವ ಪಿ.ಸಿ. ಶೇಖರ್ ಅವರೊಂದಿಗೆ ಕೆಲಸ ಮಾಡುವುದು ಖುಷಿಯಾಗಿದೆ. ವಿಜಯ ರಾಘವೇಂದ್ರ, ರಾಧಿಕಾ ಚೇತನ್ ಮುಂತಾದ ದೊಡ್ಡ ತಾರಾಬಳಗದೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದು ಸಂತಸದ ವಿಷಯ,” ಎಂದು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
‘ಮಹಾನ್’ ಚಿತ್ರವು ಗುಣಮಟ್ಟದ ಸಿನಿಮಾ ಅನುಭವವನ್ನು ಒದಗಿಸುವ ನಿರೀಕ್ಷೆಯಲ್ಲಿದ್ದು, ಪ್ರೇಕ್ಷಕರಿಗೆ ಒಂದು ಅರ್ಥಪೂರ್ಣ ಕಥೆಯನ್ನು ತಲುಪಿಸಲಿದೆ ಎಂದು ಚಿತ್ರತಂಡ ಭಾವಿಸಿದೆ.