“ಕಾರ್ಮಿಕರ ಹಿತ ಕಾಯುವುದೇ ಸರ್ಕಾರದ ಆದ್ಯತೆ”
ಬೆಂಗಳೂರು : ರಾಜ್ಯದ ವಿವಿಧ ಕಾರ್ಖಾನೆಗಳು ಮತ್ತು ನೌಕರರ ನಡುವೆ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಅವರು ಇಂದು ವಿಕಾಸಸೌಧದಲ್ಲಿ ಸರಣಿ ಸಭೆಗಳನ್ನು ನಡೆಸಿದರು.
ಇಂಡಾಲ್ಕೊ ಕಾರ್ಖಾನೆ ಸಭೆ
ಬೆಳಗಾವಿಯ ಇಂಡಾಲ್ಕೊ ಕಾರ್ಖಾನೆಯ ನೌಕರರು ಹಾಗೂ ಆಡಳಿತ ಮಂಡಳಿಯ ನಡುವೆ ಉಂಟಾದ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ನಡೆಯಿತು. ಈ ಸಂದರ್ಭದಲ್ಲಿ ಬೆಳಗಾವಿ ಶಾಸಕರಾದ ಆಸೀಫ್ ಸೇಠ್, ಕಾರ್ಮಿಕ ಆಯುಕ್ತ ಡಾ. ಗೋಪಾಲಕೃಷ್ಣ, ಉಪ ಕಾರ್ಮಿಕ ಆಯುಕ್ತರಾದ ನಾಗೇಶ್ ಮತ್ತು ವೆಂಕಟೇಶ್ ರಾಠೋಡ್, ಕಾರ್ಖಾನೆಗಳು ಮತ್ತು ಬಾಯ್ಲರ್‌ಗಳ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ವೆರ್ಜಾ ಅಟ್ಯಾಚ್‌ಮೆಂಟ್ ಕಂಪನಿ ಸಭೆ
ಕೋಲಾರ ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದಲ್ಲಿರುವ ವೆರ್ಜಾ ಅಟ್ಯಾಚ್‌ಮೆಂಟ್ ಕಂಪನಿಯ ನೌಕರರ ಸಂಘಟನೆ ಮತ್ತು ಆಡಳಿತ ಮಂಡಳಿಯ ನಡುವಿನ ಗೊಂದಲ ಪರಿಹಾರಕ್ಕಾಗಿ ಪ್ರತ್ಯೇಕ ಸಭೆ ನಡೆಯಿತು. ಈ ಸಭೆಯಲ್ಲಿ ಕಾರ್ಮಿಕ ಆಯುಕ್ತ ಗೋಪಾಲಕೃಷ್ಣ, ಕಾರ್ಖಾನೆಗಳು ಮತ್ತು ಬಾಯ್ಲರ್‌ಗಳ ಇಲಾಖೆಯ ನಿರ್ದೇಶಕ ಶ್ರೀನಿವಾಸ್, ಅಪರ ನಿರ್ದೇಶಕ ನಂಜಪ್ಪ, ಸಹಾಯಕ ಕಾರ್ಮಿಕ ಆಯುಕ್ತ ಜಹೀರ್ ಭಾಷಾ, ಜಂಟಿ ನಿರ್ದೇಶಕ ನವನೀತ್ ಮೋಹನ್, ಕಾರ್ಮಿಕ ಅಧಿಕಾರಿ ವರಲಕ್ಷ್ಮಿ, ಕಂಪನಿಯ ಹೆಚ್.ಆರ್. ಮ್ಯಾನೇಜರ್ ಹಾಗೂ ನೌಕರರ ಸಂಘದ ಪ್ರತಿನಿಧಿ ಶ್ರೀ ಗೌಡ ಪಾಲ್ಗೊಂಡಿದ್ದರು.
ಎಂವಿ ಫೋಟೊ ವೋಲ್ಟಾಯಿಕ್ ಕಾರ್ಖಾನೆ ಸಭೆ
ಬೆಂಗಳೂರು ಮೂಲದ ಎಂವಿ ಫೋಟೊ ವೋಲ್ಟಾಯಿಕ್ ಕಾರ್ಖಾನೆಯ ನೌಕರರ ಸಮಸ್ಯೆಗಳ ಕುರಿತಾದ ಸಭೆಯನ್ನೂ ಸಚಿವರು ನಡೆಸಿದರು.
ಕಾರ್ಮಿಕರ ಹಿತಕ್ಕೆ ಭರವಸೆ
ಸಭೆಗಳಲ್ಲಿ ಮಾತನಾಡಿದ ಸಂತೋಷ್ ಲಾಡ್ ಅವರು, “ಕಾರ್ಮಿಕರ ಹಿತ ಕಾಯುವುದು ಸರ್ಕಾರದ ಆದ್ಯತೆ. ಕಾರ್ಮಿಕರು ಹಾಗೂ ಕಾರ್ಖಾನೆಗಳ ನಡುವಿನ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದರು.