ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಸಾಮಾನ್ಯ ಜ್ಞಾನವಿಲ್ಲದ ವ್ಯಕ್ತಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ. ಯಲಹಂಕದ ಸಿಂಗನಾಯಕನಹಳ್ಳಿಯ ರಮಡ ರೆಸಾರ್ಟ್‌ನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರ ಇತ್ತೀಚಿನ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು.
2023ರ ಆಳಂದ ವಿಧಾನಸಭಾ ಚುನಾವಣೆಯಲ್ಲಿ 6 ಸಾವಿರಕ್ಕೂ ಅಧಿಕ ಮತದಾರರ ಹೆಸರನ್ನು ತೆಗೆದುಹಾಕಲು ಪ್ರಯತ್ನ ನಡೆದಿತ್ತು ಎಂಬ ರಾಹುಲ್ ಗಾಂಧಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ್, “ರಾಹುಲ್ ಗಾಂಧಿಯವರು ಯಾರೋ ಬರೆದುಕೊಟ್ಟಿದ್ದನ್ನು ಪದೇಪದೇ ಹೇಳುತ್ತಾ ಕಳೆದ 4-5 ವರ್ಷಗಳಿಂದ ದೇಶದಲ್ಲಿ ಅತಿ ಹೆಚ್ಚು ಅಪಹಾಸ್ಯಕ್ಕೆ ಒಳಗಾದ ವ್ಯಕ್ತಿಯಾಗಿದ್ದಾರೆ,” ಎಂದು ಕುಟುಕಿದರು.

ಅವರು ಮತ್ತಷ್ಟು ವಿವರಿಸುತ್ತಾ, “ಮೊನ್ನೆ ಮಹದೇವಪುರದ ಬಗ್ಗೆ ರಾಹುಲ್ ಗಾಂಧಿಯವರು ಬಂದು ಬಾಂಬ್ ಹಾಕುವೆ, ಮಹದೇವನನ್ನು ಸೃಷ್ಟಿಸುವೆ ಎಂದಿದ್ದರು. ಆದರೆ, ಅವರ ಆರೋಪ ಬೋಗಸ್ ಎಂದು ಸಾಬೀತಾಗಿತ್ತು. ಒಂದೇ ಮನೆಯಲ್ಲಿ ನೂರಾರು ಮತಗಳಿವೆ ಎಂದಿದ್ದರು, ಆದರೆ ಅಲ್ಲಿ ಕೇವಲ 4 ಮತಗಳು ಮಾತ್ರ ಚಲಾವಣೆಯಾಗಿತ್ತು. ಈಗ ಮತ್ತೆ ಆಳಂದವನ್ನು ಹಿಡಿದುಕೊಂಡಿದ್ದಾರೆ,” ಎಂದು ಟೀಕಿಸಿದರು.
ಆರ್. ಅಶೋಕ್ ಅವರು ಆಳಂದಕ್ಕಿಂತ ಹತ್ತಿರದ ಮಾಲೂರಿನ ಉದಾಹರಣೆಯನ್ನು ಎತ್ತಿದರು. “ಮಾಲೂರಿನಲ್ಲಿ ಮತಗಳ್ಳತನದ ಬಗ್ಗೆ ಕೋರ್ಟ್ ಆದೇಶ ಮಾಡಿದೆ. ಅಲ್ಲಿನ ಜಿಲ್ಲಾಧಿಕಾರಿಯವರು ಕೋರ್ಟ್ ಆದೇಶವಿದ್ದರೂ ಸಿಸಿಟಿವಿ ಮಾಹಿತಿಯನ್ನು ಕೊಡಲಿಲ್ಲ. ಇದರಿಂದಾಗಿ ಕಾಂಗ್ರೆಸ್ ಶಾಸಕರ ಸದಸ್ಯತ್ವವೇ ವಜಾಗೊಂಡಿದೆ. ಇದಕ್ಕಿಂತ ದೊಡ್ಡ ಸಾಕ್ಷಿ ಏನು ಬೇಕು?” ಎಂದು ಪ್ರಶ್ನಿಸಿದರು.
ಮುಂದುವರಿದು, “ಚುನಾವಣಾ ಆಯೋಗ ರಾಹುಲ್ ಗಾಂಧಿಯವರಿಗೆ ಅಫಿಡವಿಟ್ ಕೊಡಿ ಎಂದು ಕೇಳಿದರೂ ಅವರು ಕೊಟ್ಟಿಲ್ಲ. ಆದರೆ, ಮಾಲೂರಿನಲ್ಲಿ ನಮ್ಮ ಅಭ್ಯರ್ಥಿಯು ಅಫಿಡವಿಟ್ ಕೊಟ್ಟು, ಹೈಕೋರ್ಟ್‌ಗೆ ತನಿಖೆಗೆ ವಿನಂತಿಸಿದ್ದರು. ಹೈಕೋರ್ಟ್ ಕೂಡ ಜಿಲ್ಲಾಧಿಕಾರಿಯವರು ತಪ್ಪು ಮಾಡಿದ್ದಾರೆ ಎಂದು ಕ್ರಮಕ್ಕೆ ಆದೇಶಿಸಿತು. ರಾಹುಲ್ ಗಾಂಧಿಯವರಿಗೆ ಇದರ ಜ್ಞಾನವೇ ಇಲ್ಲವೇ?” ಎಂದು ಆರ್. ಅಶೋಕ್ ಲೇವಡಿ ಮಾಡಿದರು.