ನವದೆಹಲಿ: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 12ನೇ ಆವೃತ್ತಿಯ ಎಲಿಮಿನೇಟರ್ 2 ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಸ್ಥಿರತೆ ಕಾಯ್ದುಕೊಳ್ಳಲು ವಿಫಲವಾಗಿ ಪಟನಾ ಪೈರೇಟ್ಸ್ ವಿರುದ್ಧ 8 ಅಂಕಗಳ ಅಂತರದಿಂದ ಸೋತು ಹೊರಬಿದ್ದಿತು. ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 37-45 ಅಂಕಗಳಿಂದ ಪರಾಭವಗೊಂಡಿತು. ಈ ಗೆಲುವಿನೊಂದಿಗೆ ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ಎಲಿಮಿನೇಟರ್ 3ಕ್ಕೆ ಅರ್ಹತೆ ಗಳಿಸಿತು.
ಪಂದ್ಯದ ಮುಖ್ಯಾಂಶಗಳು
- ಪಟನಾ ಪೈರೇಟ್ಸ್ ಪರ: ಆಯಾನ್ (19 ಅಂಕಗಳು), ಅಂಕಿತ್ ಕುಮಾರ್ ಮತ್ತು ದೀಪಕ್ ತಲಾ (ತಲಾ 6 ಅಂಕಗಳು).
- ಬೆಂಗಳೂರು ಬುಲ್ಸ್ ಪರ: ಶುಭಂ (7 ಅಂಕಗಳು), ಅಲಿರೇಜಾ (6 ಅಂಕಗಳು), ಆಶಿಶ್ ಮಲಿಕ್ (5 ಅಂಕಗಳು).
ಪಂದ್ಯ ಮುಕ್ತಾಯಕ್ಕೆ ಎರಡು ನಿಮಿಷಗಳು ಬಾಕಿ ಇರುವಾಗ ಬುಲ್ಸ್ 34-41ರಲ್ಲಿ ಹೋರಾಡುತ್ತಿತ್ತು. ಆದರೆ ಕೊನೆಯ ಕ್ಷಣಗಳಲ್ಲಿ ಪೈರೇಟ್ಸ್ ಆಟಗಾರರು ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದ್ದರಿಂದ ಬುಲ್ಸ್ ಯೋಜನೆಗಳು ವಿಫಲಗೊಂಡವು. ಇದರಿಂದ ಬುಲ್ಸ್ ತಂಡದ ಪ್ರಶಸ್ತಿ ಕನಸು ಪ್ಲೇಆಫ್ ಹಂತದಲ್ಲೇ ಕೊನೆಗೊಂಡಿತು. ಕೊನೆಯ ಹತ್ತು ನಿಮಿಷಗಳಲ್ಲಿ ಉಭಯ ತಂಡಗಳ ತೀವ್ರ ಪೈಪೋಟಿ ಕಂಡುಬಂದಿತು. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದ ಅಲಿರೇಜಾ ಮಿರ್ಜಾಯಿನ್ ಅವರನ್ನು ಪೈರೇಟ್ಸ್ ಕಟ್ಟಿಹಾಕಿದ್ದು ಬುಲ್ಸ್‌ಗೆ ದೊಡ್ಡ ಹಿನ್ನಡೆಯಾಯಿತು. ಆದರೂ ಇತರ ಆಟಗಾರರು ಗಮನ ಸೆಳೆದರು.
ದ್ವಿತೀಯಾರ್ಧದಲ್ಲಿ ಬುಲ್ಸ್ ಪುನರಾಗಮನ
ದ್ವಿತೀಯಾರ್ಧದಲ್ಲಿ ಬುಲ್ಸ್ ತಂಡಕ್ಕೆ ದೊಡ್ಡ ಸವಾಲು ಎದುರಾಯಿತು. ಪೈರೇಟ್ಸ್ ಮುನ್ನಡೆ ವಿಸ್ತರಿಸುವ ಗುರಿಯೊಂದಿಗೆ ಆಟ ಮುಂದುವರಿಸಿತು. ಆದರೆ ಸಂಘಟಿತ ಹೋರಾಟದಿಂದ ಬುಲ್ಸ್ ಹಿನ್ನಡೆ ತಗ್ಗಿಸಿತು. 30ನೇ ನಿಮಿಷದಲ್ಲಿ ಸಂಜಯ್ ಬದಲಿಗೆ ಕಣಕ್ಕಿಳಿದ ಶುಭಂ ಮೊದಲ ದಾಳಿಯಲ್ಲೇ ಆರು ಆಟಗಾರರನ್ನು ಔಟ್ ಮಾಡಿ ಅಚ್ಚರಿ ಮೂಡಿಸಿದರು. ಇದರಿಂದ ಬುಲ್ಸ್ 29-36ರಲ್ಲಿ ಪುಟಿದೇಳಿತು.

ಮೊದಲಾರ್ಧದಲ್ಲಿ ಪೈರೇಟ್ಸ್ ಆಧಿಪತ್ಯ
ಮೊದಲಾರ್ಧದ ಅಂತ್ಯಕ್ಕೆ ಬೆಂಗಳೂರು ಬುಲ್ಸ್ 13-27 ಅಂಕಗಳ ಭಾರಿ ಹಿನ್ನಡೆ ಅನುಭವಿಸಿತು. ಭಾನುವಾರದ ಮಿನಿ ಕ್ವಾಲಿಫೈಯರ್‌ನಲ್ಲಿ ತೆಲುಗು ಟೈಟನ್ಸ್ ವಿರುದ್ಧ ದಿಟ್ಟ ಪ್ರದರ್ಶನ ನೀಡಿ 5 ಅಂಕಗಳಿಂದ ಸೋತಿದ್ದ ಬುಲ್ಸ್, ಪಟನಾ ವಿರುದ್ಧ ಗೆದ್ದು ಎಲಿಮಿನೇಟರ್ 3ಕ್ಕೆ ಅರ್ಹತೆ ಗಳಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿದಿತು. ಆದರೆ ಆರಂಭದಿಂದಲೇ ಸಮನ್ವಯ ಕೊರತೆ ಎದುರಾಯಿತು.
ಪಂದ್ಯದ 6ನೇ ನಿಮಿಷದಲ್ಲೇ ಪೈರೇಟ್ಸ್ ಬುಲ್ಸ್‌ನ್ನು ಆಲೌಟ್ ಮಾಡಿ ಮೇಲುಗೈ ಸಾಧಿಸಿತು. ಒತ್ತಡಕ್ಕೆ ಒಳಗಾದ ಬುಲ್ಸ್ ಪದೇ ಪದೇ ತಪ್ಪುಗಳನ್ನು ಎಸಗಿತು. ಆಯಾನ್ ಜಿತೇಂದ್ರ ಯಾದವ್ ಮತ್ತು ದೀಪಕ್ ಶಂಕರ್ ಅವರನ್ನು ರೇಡಿಂಗ್‌ನಲ್ಲಿ ಔಟ್ ಮಾಡಿ ತಂಡಕ್ಕೆ ಹುರುಪು ತುಂಬಿದರು. 10 ನಿಮಿಷಗಳ ಅಂತ್ಯಕ್ಕೆ 15-5ರ ಮುನ್ನಡೆ ಸಾಧಿಸಿದ ಪೈರೇಟ್ಸ್, 10-15 ನಿಮಿಷಗಳಲ್ಲಿ ಬುಲ್ಸ್ ಎರಡು ಸೂಪರ್ ಟ್ಯಾಕಲ್ ಪಾಯಿಂಟ್ಸ್ ಗಳಿಸಿ 10-16ಕ್ಕೆ ತಂದಿತು. ಆದರೆ 18ನೇ ನಿಮಿಷದಲ್ಲಿ ಎರಡನೇ ಬಾರಿ ಆಲೌಟ್ ಆದ ಬುಲ್ಸ್ ಹಿನ್ನಡೆಗೆ ಕಾರಣವಾಯಿತು. ಆಯಾನ್ ಮೊದಲಾರ್ಧದಲ್ಲೇ 12 ಅಂಕಗಳಿಸಿ ಕಂಗೊಳಿಸಿದರು.
ಈ ಸೋಲಿನೊಂದಿಗೆ ಬೆಂಗಳೂರು ಬುಲ್ಸ್ ಟೂರ್ನಿಯಿಂದ ಹೊರಬಿದ್ದರೆ, ಪಟನಾ ಪೈರೇಟ್ಸ್ ಮುಂದಿನ ಹಂತಕ್ಕೆ ಸಾಗುತ್ತಿದೆ.












