ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತು ರಸ್ತೆ ಗುಂಡಿಗಳ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ.
ಒಂದು ಗಂಟೆಗಳ ಕಾಲ ನಡೆದ ಈ ಭೇಟಿಯು ಬಹಳ ಸೌಹಾರ್ದಯುತವಾಗಿ ಸಾಗಿದ್ದು, ಶಾಂತವಾಗಿ ತಾವು ಮಂಡಿಸಿದ ಪ್ರಸ್ತಾಪಗಳನ್ನು ಡಿಕೆಶಿ ಅವರು ಓದಿದ್ದಾಗಿ ತೇಜಸ್ವಿ ಸೂರ್ಯ ಹೇಳಿದ್ದಾರೆ. ವಿಶೇಷವಾಗಿ ಟನಲ್ ರೋಡ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ.

ಟ್ರಾಫಿಕ್ ಕಡಿಮೆಯಾಗಬೇಕಾದರೆ ರಸ್ತೆಗಳಲ್ಲಿರುವ ವಾಹನಗಳ ಸಂಖ್ಯೆ ಇಳಿಕೆಯಾಗಬೇಕು ಎಂದ ಅವರು, ಶೇ.70ರಷ್ಟು ಸಾರ್ವಜನಿಕ ಸಾರಿಗೆ ಬಳಕೆ ಮತ್ತು 300 ಕಿ.ಮೀ ಮೆಟ್ರೋ ಕನೆಕ್ಟಿವಿಟಿ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ. ಪ್ರತಿ ಮೂರು ನಿಮಿಷಗಳಿಗೊಮ್ಮೆ ಮೆಟ್ರೋ ಸೇವೆ ಲಭ್ಯವಾಗುವಂತೆ ಮಾಡಬೇಕು ಹಾಗೂ ಸಬರ್ಬನ್ ರೈಲು ವ್ಯವಸ್ಥೆಯನ್ನು ಬೆಂಗಳೂರಿಗೆ ವಿಸ್ತರಿಸಬೇಕು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.
ಇದರ ಜೊತೆಗೆ 600 ಕಿ.ಮೀ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಲಭ್ಯವಾದರೆ ಟ್ರಾಫಿಕ್ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ಸಲಹೆಗಳನ್ನು ಡಿ.ಕೆ. ಶಿವಕುಮಾರ್ ಅವರಿಗೆ ಮಂಡಿಸಿದ್ದಾಗಿ ಅವರು ತಿಳಿಸಿದ್ದಾರೆ.












