ಬೆಳಗಾವಿ: “ರೈತ ನಕ್ಕರೆ ನಾಡು ಬೆಳಗುವುದು, ರೈತ ನೊಂದರೆ ಸಮಾಜ ನಲುಗುವುದು” ಎಂಬ ಘೋಷವಾಕ್ಯದೊಂದಿಗೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಚಿಕ್ಕೋಡಿ ಭಾಗಗಳ ಕಬ್ಬು ಬೆಳೆಗಾರರು ತಮ್ಮ ಬೆವರಿನ ಬೆಲೆಗಾಗಿ ನ್ಯಾಯದ ಹೋರಾಟ ನಡೆಸುತ್ತಿದ್ದಾರೆ. ಈ ರೈತರ ಧ್ವನಿಯೊಂದಿಗೆ ಸೇರಿಕೊಳ್ಳುವುದು ತಮ್ಮ ಶ್ರೇಷ್ಠ ಕರ್ತವ್ಯ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಘೋಷಿಸಿದ್ದಾರೆ.

ಕಬ್ಬು ಬೆಳೆಗಾರರ ಬೇಡಿಕೆ ಈಡೇರಿ ಸಿಹಿಯ ಬೆಲೆ ದೊರೆಯುವವರೆಗೂ ನಿದ್ರೆಗೆ ಜಾರುವ ಪ್ರಶ್ನೆಯೇ ಇಲ್ಲ ಎಂದು ದೃಢ ನಿಲುವು ತಳೆದಿರುವ ಅವರು, ರೈತರಿಗಾಗಿ ಹೋರಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದಲ್ಲಿ ಮುನ್ನಡೆಯುವುದು ತಮ್ಮ ಪರಮ ಕರ್ತವ್ಯ ಎಂದು ಹೇಳಿದರು. “ಭೂಮಿ ನಂಬಿ ಬದುಕುವ ರೈತ ಈ ದೇಶದ ಅನ್ನದಾತ. ರೈತರಿದ್ದರೆ ನಾಡು, ರೈತರಿಗಾಗಿ ನಾವು” ಎಂದು ಭಾವುಕ ಅಪೀಲ್ ನೀಡಿದರು.

ಈ ಹೋರಾಟದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ದುರ್ಯೋಧನ ಐಹೊಳೆ, ಸಿದ್ದು ಸವದಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ವಿಜಯಪುರ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕ ವಿಶ್ವನಾಥ್ ಪಾಟೀಲ್, ಮುಖಂಡ ಮಹಾಂತೇಶ್ ವಕ್ಕುಂದ್ ಸೇರಿದಂತೆ ರೈತ ಹೋರಾಟಗಾರರು, ವಿವಿಧ ರೈತಪರ ಸಂಘಟನೆಗಳ ಪ್ರಮುಖರು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಬ್ಬು ಬೆಳೆಗಾರರ ಪರಿಶ್ರಮಕ್ಕೆ ತಕ್ಕ ನ್ಯಾಯ ದೊರಕಿಸಿಕೊಡುವ ತನಕ ಹೋರಾಟ ಮುಂದುವರಿಯಲಿದೆ ಎಂಬ ಸಂದೇಶ ಈ ಕಾರ್ಯಕ್ರಮದ ಮೂಲಕ ರೈತ ಸಮುದಾಯಕ್ಕೆ ತಲುಪಿದೆ.











