ಬೆಂಗಳೂರು: ಗೀತರಚನೆ ಎನ್ನುವುದು ಕಲಿಯುವ ಅಥವಾ ಕಲಿಸುವ ವಿಷಯವಲ್ಲ, ಅದು ಸುಪ್ತಮನಸ್ಸಿನ ಆಳದಿಂದ ಸ್ಫುರಿಸಬೇಕು ಎಂದು ಖ್ಯಾತ ಸಾಹಿತಿ ಹಾಗೂ ಚಿತ್ರಗೀತರಚನಕಾರ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟಿದ್ದಾರೆ.
17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (BIFFes) ವೇದಿಕೆಯಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಗೀತರಚನೆಯನ್ನು ಕಲಿಸುವುದಕ್ಕೆ ಸಾಧ್ಯವಿಲ್ಲ. ಅದು ಕನಸಿನಲ್ಲಿ ಅಮೂರ್ತವಾಗಿ ಕಾಣುವಂತೆಯೇ ಬರುತ್ತದೆ. ನಿರ್ದೇಶನ ಅಥವಾ ನಟನೆಯಂತೆ ಗೀತರಚನೆಗೆ ತರಬೇತಿ ಸಾಧ್ಯವಿಲ್ಲ. ತರಬೇತಿ ಪಡೆದರೆ ಎಲ್ಲರೂ ಒಂದೇ ರೀತಿ ಕಾಣುತ್ತಾರೆ – ಜಿಮ್‌ನಿಂದ ಬಂದ ದೇಹಗಳಂತೆ ಅಥವಾ ಬ್ಯೂಟಿ ಪಾರ್ಲರ್‌ನಿಂದ ಬಂದ ವಧುವಿನಂತೆ. ಸ್ವತಂತ್ರವಾಗಿ ಬರೆಯುವುದರಿಂದ ಮಾತ್ರ ತನ್ನದೇ ಆದ ಛಾಪು ಮೂಡಿಸಬಹುದು” ಎಂದರು.
ಕನ್ನಡ ಕಾವ್ಯ ಮತ್ತು ಸಾಹಿತ್ಯವನ್ನು ವ್ಯಾಪಕವಾಗಿ ಓದಬೇಕು, ಜನಜೀವನವನ್ನು ನಿಕಟವಾಗಿ ನೋಡಬೇಕು ಎಂದು ಅವರು ಸಲಹೆ ನೀಡಿದರು. “ಯಾವುದೇ ತರಬೇತಿ ಅಥವಾ ಕಾರ್ಯಾಗಾರಗಳಿಂದ ಗೀತರಚನೆ ಬರುವುದಿಲ್ಲ” ಎಂದು ಒತ್ತಿ ಹೇಳಿದರು.
ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಸ್ವೀಕರಿಸಬೇಕು ಎಂದು ಹೇಳಿದ ಜಯಂತ್ ಕಾಯ್ಕಿಣಿ, “ಹಳೆಯದೆಲ್ಲಾ ಚೆನ್ನಾಗಿತ್ತು, ಈಗ ಚೆನ್ನಾಗಿಲ್ಲ ಎನ್ನುವುದು ತಪ್ಪು. ನಾವು ಸಹ ಮೊದಲಿನಂತಿಲ್ಲ. ತಂತ್ರಜ್ಞಾನ ಬೆಳೆಯುತ್ತಿದೆ, ಸಮಯ ಬದಲಾಗುತ್ತಿದೆ. ನಾವೂ ಬದಲಾಗಬೇಕು” ಎಂದರು.
ತಾವು ಬಾಲ್ಯದಿಂದಲೇ ಸಿನಿಮಾ ಹಾಡುಗಳ ಪ್ರೇಮಿ ಎಂದು ತಿಳಿಸಿದ ಅವರು, ತಮ್ಮ ತಂದೆಯ ಮಾತನ್ನು ನೆನಪಿಸಿಕೊಂಡರು: “ಗೊಣಗುವುದಕ್ಕಿಂತ ಗುನುಗುವುದು ಮೇಲು”. 52ನೇ ವಯಸ್ಸಿನಲ್ಲಿ ಸಿನಿಮಾ ಗೀತರಚನೆಯನ್ನು ಆರಂಭಿಸಿದ್ದಾಗಿ ಹೇಳಿದ ಅವರು, ಯೌವನದಲ್ಲಿ ‘ಕೋಟಿತೀರ್ಥ’ ಎಂಬ ಗಂಭೀರ ಕೃತಿಯನ್ನು ಬರೆದಿದ್ದರು ಎಂದು ಉಲ್ಲೇಖಿಸಿದರು.
ಸಿನಿಮಾ ಹಾಡುಗಳನ್ನು ಬರೆಯುವುದು ಸುಲಭ ಎಂದು ಆರಂಭದಲ್ಲಿ ಭಾವಿಸಿದ್ದಾಗಿ ಹೇಳಿದ ಅವರು, ನಂತರ ಅದರ ಕಷ್ಟ ಅರಿತರು. “ಟ್ಯೂನ್‌ಗೆ ತಕ್ಕಂತೆ ಮೀಟರ್ ಹೊಂದಿಸಿ ಸಾಹಿತ್ಯ ರಚಿಸುವುದು ದೊಡ್ಡ ಸವಾಲು. ಕೋಟ್ಯಂತರ ಹಾಡುಗಳಿದ್ದರೂ ವಿಭಿನ್ನವಾಗಿ ಬರೆಯಬೇಕು. ಪ್ರೇಮಗೀತೆಗಳೇ 97% ಇರುವಾಗ, ಒಲವು, ನಲಿವು, ಚೆಲುವು, ಹಸಿರು, ಉಸಿರು ಮುಂತಾದ ಪದಗಳನ್ನೇ ಮರುಬಳಕೆ ಮಾಡಿ ಹೊಸ ಎಕ್ಸ್‌ಪ್ರೆಶನ್ ಸೃಷ್ಟಿಸುವುದು ಸವಾಲು” ಎಂದರು.

ಸಿನಿಮಾ ಹಾಡುಗಳ ಮೂಲಕ ಹೊಸ ಓದುಗರು ತಮ್ಮ ಪುಸ್ತಕಗಳನ್ನು ತಲುಪಿದ್ದಾಗಿ ಹೇಳಿದ ಅವರು, ಇದನ್ನು ‘ರಿವರ್ಸ್ ಆಸ್ಮೋಸಿಸ್’ ಪ್ರಕ್ರಿಯೆ ಎಂದು ವರ್ಣಿಸಿದರು. “ಹಿತೈಷಿಗಳು ಸಿನಿಮಾ ಹಾಡುಗಳನ್ನು ಬರೆಯುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಆದರೆ ನಾನು ಬೇರೆ ಸಾಹಿತ್ಯವನ್ನು ಕಡೆಗಣಿಸಿಲ್ಲ. ಹೊಸ ತಲೆಮಾರಿನವರು ಹಾಡುಗಳ ಮೂಲಕ ನನ್ನ ಕಥೆ-ಕವನಗಳನ್ನು ಓದಲು ಆರಂಭಿಸಿದರು. ಇದರಿಂದ ಪುಸ್ತಕಗಳ ಮರುಮುದ್ರಣವಾಯಿತು” ಎಂದರು.
ಸಿನಿಮಾ ಒಂದು ಅಪರೂಪದ ಮಾಧ್ಯಮ ಎಂದು ಹೇಳಿದ ಅವರು, “ವ್ಯಕ್ತ, ಶ್ರಾವ್ಯ ಮತ್ತು ದೃಶ್ಯ – ಮೂರು ಗುಣಗಳನ್ನು ಹೊಂದಿದ್ದು. ನಿರ್ದೇಶಕನಿಗೆ ಇದರ ಹಿಡಿತವಿದ್ದರೆ ಅದ್ಭುತ ಸೃಷ್ಟಿ ಸಾಧ್ಯ” ಎಂದರು.
ಬಾಲ್ಯದಲ್ಲಿ ತಮ್ಮೂರಿನ ಟೂರಿಂಗ್ ಟಾಕೀಸ್‌ನಿಂದ ಸಿನಿಮಾ ಆಸಕ್ತಿ ಹುಟ್ಟಿತು ಎಂದು ನೆನಪಿಸಿಕೊಂಡ ಅವರು, ‘ಕಠಾರಿ ವೀರ’, ‘ಬೀದಿ ಬಸವಣ್ಣ’, ‘ಚೂರಿ ಚಿಕ್ಕಣ್ಣ’, ‘ಚಂದವಳ್ಳಿಯ ತೋಟ’ ಮುಂತಾದ ಚಿತ್ರಗಳನ್ನು ನೋಡಿ ಬೆಳೆದರು. ಜಾವೇದ್ ಅಖ್ತರ್ ಅವರ ಮಾತನ್ನು ಉಲ್ಲೇಖಿಸಿ, “ಸಿನಿಮಾನೇ ನಮ್ಮ ಧರ್ಮ” ಎಂದರು.
‘ಪೊನ್ನಿಯನ್ ಸೆಲ್ವನ್’ ಚಿತ್ರದ ಕನ್ನಡ ಡಬ್ಬಿಂಗ್‌ಗೆ ಹಾಡುಗಳನ್ನು ಸ್ವತಂತ್ರವಾಗಿ ರಚಿಸಿದ ಅನುಭವವನ್ನು ಹಂಚಿಕೊಂಡ ಅವರು, ಎ.ಆರ್. ರೆಹಮಾನ್ ಸಂಗೀತಕ್ಕೆ 14 ಹಾಡುಗಳಲ್ಲಿ ಭಾಷಾಂತರವಲ್ಲದೆ ಸ್ವಂತ ರಚನೆಗೆ ಅವಕಾಶ ಕೊಟ್ಟ ಮಣಿರತ್ನಂ ಅವರನ್ನು ಸ್ಮರಿಸಿದರು. ತಮಿಳಿನ ‘ಕಾದಲ್’ಗೆ ಹೋಲಿಸಿ ಕನ್ನಡದಲ್ಲಿ ಪ್ರೀತಿ ಹೇಳಲು ತುಟಿಗಳನ್ನು ತಾಗಿಸಬೇಕು ಎಂದು ತಮಾಷೆಯಿಂದ ಹೇಳಿದ್ದಾಗಿ ನೆನಪಿಸಿಕೊಂಡರು.
ಪ್ರಶಾಂತ್ ಪಂಡಿತ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
o











