ಬೆಂಗಳೂರು: ಕರ್ನಾಟಕದಲ್ಲಿ ಕೃಷಿ ಮತ್ತು ಸಿನಿಮಾ ಕ್ಷೇತ್ರಗಳಿಗೆ ಸಂಬಂಧಿಸಿದ ಎರಡು ಪ್ರಮುಖ ಕಾರ್ಯಕ್ರಮಗಳು ಶುಕ್ರವಾರ (ಫೆ.6) ನಡೆಯಲಿವೆ. ಕೃಷಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026ರ ಉದ್ಘಾಟನಾ ಸಮಾರಂಭ ಮತ್ತು 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (BIFFes) ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭಗಳು ಇಂದು ನಡೆಯಲಿವೆ.
ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026 ಉದ್ಘಾಟನೆ
‘ಉತ್ಪಾದನೋತ್ತರ ಕೃಷಿ – ರೈತರ ಸಬಲೀಕರಣ’ ಘೋಷವಾಕ್ಯದಡಿ ಆಯೋಜಿಸಲಾಗಿರುವ ಈ ಮೇಳ ಫೆಬ್ರವರಿ 6ರಿಂದ 8ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.
ಘನ ಉಪಸ್ಥಿತಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಲಿದ್ದಾರೆ. ಕೇಂದ್ರ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಉದ್ಯೋಗ ಖಾತೆ ರಾಜ್ಯ ಸಚಿವ ಕು. ಶೋಭಾ ಕರಂದ್ಲಾಜೆ ಅವರು ವಿಶೇಷ ಉಪಸ್ಥಿತರಾಗಿರುತ್ತಾರೆ.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕರಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಗಣಿ, ಭೂ ವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರು ಭಾಗವಹಿಸಲಿದ್ದಾರೆ.
ಸಮಯ: ಬೆಳಿಗ್ಗೆ 11.00 ಗಂಟೆ
ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ, ಬೆಂಗಳೂರು.
ಈ ಮೇಳದಲ್ಲಿ ಸಾವಯವ ಸಿರಿಧಾನ್ಯಗಳು, ಮೌಲ್ಯವರ್ಧನೆ, ಸಂಸ್ಕರಣೆ, ಬ್ರಾಂಡಿಂಗ್ ಮತ್ತು ರೈತರಿಗೆ ಮಾರುಕಟ್ಟೆ ಸಂಪರ್ಕಗಳ ಮೇಲೆ ಒತ್ತು ನೀಡಲಾಗುತ್ತದೆ. 120ಕ್ಕೂ ಹೆಚ್ಚು ಕೃಷಿ ಪಂಡಿತ ಮತ್ತು ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನಿಸಲಾಗುವುದು.
17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ
ಜನವರಿ 29ರಿಂದ ಫೆಬ್ರವರಿ 6ರವರೆಗೆ ನಡೆಯುತ್ತಿರುವ 17ನೇ BIFFesದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಸಂಜೆ ನಡೆಯಲಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ಸಾಧು ಕೋಕಿಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಾ. ಜಯಮಾಲಾ ಮತ್ತು ಚಿತ್ರೋತ್ಸವದ ರಾಯಭಾರಿ ಖ್ಯಾತ ನಟ ಪ್ರಕಾಶ್ ರಾಜ್ ಅವರು ಭಾಗವಹಿಸಲಿದ್ದಾರೆ.
ಸಮಯ: ಸಂಜೆ 6.00 ಗಂಟೆ
ಸ್ಥಳ: ಆಡಿ-5, ಸಿನಿಪೊಲಿಸ್ ಸಿನಿಮಾಸ್, ಲುಲುಮಾಲ್, ರಾಜಾಜಿನಗರ, ಬೆಂಗಳೂರು.
ಈ ಚಿತ್ರೋತ್ಸವದಲ್ಲಿ 70ಕ್ಕೂ ಹೆಚ್ಚು ದೇಶಗಳ 225ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನಗೊಂಡಿವೆ. ಈ ಬಾರಿ ‘ಸ್ತ್ರೀ ಸಂವೇದನೆ ಮತ್ತು ಸಮಾನತೆ’ ಥೀಮ್‌ಗೆ ಆದ್ಯತೆ ನೀಡಲಾಗಿದೆ. ಸಮಾರೋಪದಲ್ಲಿ ವಿಜೇತರಿಗೆ ಪ್ರಶಸ್ತಿಗಳು ಮತ್ತು ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಗೌರವಗಳನ್ನು ಪ್ರದಾನಿಸಲಾಗುವುದು.
ಈ ಎರಡೂ ಕಾರ್ಯಕ್ರಮಗಳಿಗೆ ಮಾಧ್ಯಮಗಳು, ಸಾರ್ವಜನಿಕರು ಮತ್ತು ಸಂಬಂಧಿತ ಕ್ಷೇತ್ರದವರು ಆಗಮಿಸುವಂತೆ ಆಹ್ವಾನಿಸಲಾಗಿದೆ.












