ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಪ್ರಯಾಣ ದರ ಏರಿಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನತೆಗೆ ಸುಳ್ಳು ಹೇಳುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆರೋಪ ಮಾಡಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲು 80% ಇದ್ದರೆ ಕೇಂದ್ರ ಸರ್ಕಾರ ಹೇಗೆ ದರ ಏರಿಸಬಹುದು ಎಂದು ಪ್ರಶ್ನಿಸಿದರು.
ಮೆಟ್ರೋ ಯೋಜನೆಯಲ್ಲಿ ಕೇಂದ್ರ ಸರ್ಕಾರ ಕೇವಲ 20% ಅನುದಾನ ನೀಡುತ್ತದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಉಲ್ಲೇಖಿಸಿದ ಕುಮಾರಸ್ವಾಮಿ, ಹಾಗಿದ್ದರೆ ದರ ಏರಿಕೆ ಮಾಡಿದ್ದು ಯಾರು? ಕೇಂದ್ರವೋ ಅಥವಾ ರಾಜ್ಯ ಸರ್ಕಾರವೋ? ಎಂದು ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರ ಜನರ ಮೇಲೆ ಮಂಕುಬೂದಿ ಎರಚುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಮಾತ್ರ ಮೆಟ್ರೋ ದರಗಳು ಪದೇಪದೇ ದೊಡ್ಡ ಮೊತ್ತದಲ್ಲಿ ಏರಿಕೆಯಾಗುತ್ತಿವೆ ಎಂದು ಟೀಕಿಸಿದ ಅವರು, ಬೇರೆ ರಾಜ್ಯಗಳಲ್ಲಿ ಏಕೆ ಇಂತಹ ಏರಿಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು. ಅಲ್ಲಿನ ಸರ್ಕಾರಗಳು ಹೇಗೆ ನಿರ್ವಹಣೆ ಮಾಡುತ್ತಿವೆ ಎಂಬುದನ್ನು ರಾಜ್ಯ ಸರ್ಕಾರ ವಿವರಿಸಬೇಕು ಎಂದರು. ತಮ್ಮ ಪಾಲು ಜಾಸ್ತಿ ಎನ್ನುವವರು ದರ ಏರಿಕೆ ವಿಷಯದಲ್ಲಿ ಏಕೆ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯ ಸರ್ಕಾರದ ತಪ್ಪು ನಿರ್ಣಯಗಳಿಂದ ಜನರು ರೋಸಿಹೋಗಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ, ತಪ್ಪುಗಳನ್ನು ಕೇಂದ್ರದ ತಲೆಗೆ ಕಟ್ಟುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದರು. ಜನರು ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.
ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ಬದುಕಿಸುತ್ತಿದ್ದೇವೆ, ಜನರ ಖರ್ಚು ಮಾಡುವ ಶಕ್ತಿ ಹೆಚ್ಚಿಸಿದ್ದೇವೆ, ತಲಾ ಆದಾಯ ಹೆಚ್ಚಳವಾಗಿದೆ ಎಂದು ಹೇಳುತ್ತಿದೆ ಎಂದು ವ್ಯಂಗ್ಯವಾಡಿದ ಅವರು, ಜನರಲ್ಲಿ ದುಡ್ಡಿದೆ ಎಂದು ಭಾವಿಸಿ ಮನಸೋ ಇಚ್ಛೆ ತೆರಿಗೆ ಹಾಕುವುದು, ದರ ಏರಿಕೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಗ್ಯಾರಂಟಿಗಳಿಂದ ಜನರು ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ, ಸಂತೋಷವಾಗಿದ್ದಾರೆ ಎಂದು ಸರ್ಕಾರ ಭಾವಿಸಿದ್ದರೆ, ಯಾವುದೇ ದರ ಏರಿಕೆ ಮಾಡಿದರೂ ಜನರು ಸಂತೋಷವಾಗಿ ಕೊಡುತ್ತಾರೆ ಎಂಬ ಭ್ರಮೆಯಲ್ಲಿ ಮುಖ್ಯಮಂತ್ರಿ ಇದ್ದಾರೆ ಎಂದರು. ಹೀಗಾಗಿ ಜನರೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಈ ದರ ಏರಿಕೆ ಫೆಬ್ರವರಿ 9ರಿಂದ ಜಾರಿಗೆ ಬರಲಿದ್ದು, ಶೇ.5ರಷ್ಟು ಹೆಚ್ಚಳವಾಗಲಿದೆ ಎಂದು ಬಿಎಂಆರ್‌ಸಿಎಲ್ ಘೋಷಿಸಿದೆ. ಇದು ದರ ನಿಗದಿ ಸಮಿತಿ (FFC) ಶಿಫಾರಸ್ಸಿನಂತೆ ವಾರ್ಷಿಕ ಸ್ವಯಂಚಾಲಿತ ಪರಿಷ್ಕರಣೆಯ ಭಾಗವಾಗಿದೆ ಎಂದು ನಿಗಮ ತಿಳಿಸಿದೆ. ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ವಾಗ್ದಾಳಿ ತಾರಕಕ್ಕೇರಿದೆ.












