ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿಯ ನೀರು ತರುವ ಬಗ್ಗೆ ಶೀಘ್ರದಲ್ಲಿಯೇ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ.
ಕೋಲಾರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಜಿಲ್ಲೆಗಳಿಗೆ ನದಿಯ ನೀರು ಕೊಡುತ್ತೇವೆ ಎಂದು ಹೇಳಿ ಎತ್ತಿನಹೊಳೆ ಯೋಜನೆಯನ್ನು ಆರಂಭಿಸಲಾಯಿತು ಆದರೆ ಬೆಂಗಳೂರಿನ ರೊಚ್ಚು ನೀರು ಕೊಟ್ಟರು ಎಂದು ಟೀಕಿಸಿದರು. ಮೂರನೇ ಹಂತದ ಶುದ್ಧೀಕರಣವನ್ನೂ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೃಷ್ಣಾ ನದಿಯ ನೀರು ಬಿಟ್ಟರೆ ಬೇರೆ ದಾರಿ ಇಲ್ಲ ಎಂದರು.
ಸಂಸದ ಮಲ್ಲೇಶ್ ಬಾಬು ಅವರು ಈ ಕುರಿತು ಪ್ರಯತ್ನ ಮಾಡುತ್ತಿದ್ದು, ತಮ್ಮ ಬೆಂಬಲವೂ ಇದೆ ಎಂದು ಹೇಳಿದರು. ಆಂಧ್ರದ ಮುಖ್ಯಮಂತ್ರಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಸಾಧಿಸಬೇಕಿದ್ದು, ಅವರ ರಾಜ್ಯದ ಜನರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಸಹಕಾರ ಪಡೆಯುವ ಪ್ರಯತ್ನ ಮಾಡುತ್ತೇವೆ ಎಂದರು. ಮಲ್ಲೇಶ್ ಬಾಬು ಅವರನ್ನು ಗೆಲ್ಲಿಸಿದ ಋಣ ತೀರಿಸುವುದಾಗಿ ಹೇಳಿದರು.
2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆಯ ದಿನವೇ ತಾವು ಕೋಲಾರದಲ್ಲಿದ್ದು, ನೀರು ಸಿಗುವುದಿಲ್ಲ ಎಂದು ಹೇಳಿದ್ದಾಗಿ ನೆನಪಿಸಿಕೊಂಡರು. ಐದೇ ವರ್ಷದಲ್ಲಿ ನೀರು ಕೊಡುತ್ತೇವೆ ಎಂದು ಹೇಳಿದ್ದರು. ತಾವು ಹಳ್ಳಿ ಭಾಷೆಯಲ್ಲಿ ‘ಎರಡು ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ಳುವೆ’ ಎಂದು ಹೇಳಿದ್ದಾಗಿ ಲೇವಡಿ ಮಾಡಿದರು. ತಲೆಯ ಕೂದಲು ಹೋಯಿತೇ ಹೊರತು ನೀರು ಹರಿಯಲಿಲ್ಲ ಎಂದರು.
ಹತ್ತು ವರ್ಷಗಳಾದರೂ ಯೋಜನೆಯಲ್ಲಿ ಲೂಟಿ ನಡೆದಿದೆ. ಸಿಎಜಿ ವರದಿಯಲ್ಲಿ ಅನರ್ಹ ಗುತ್ತಿಗೆದಾರರಿಗೆ ಕಾಮಗಾರಿ ಕೊಟ್ಟು, ಕಳಪೆ ಕೆಲಸ ಮಾಡಿ ಹಣ ದುರುಪಯೋಗವಾಗಿದೆ ಎಂದು ಉಲ್ಲೇಖವಿದೆ. ಯೋಜನಾ ವೆಚ್ಚ ₹30,000 ಕೋಟಿಗೆ ಏರಿಕೆಯಾಗಿದೆ ಎಂದು ಪ್ರಶ್ನಿಸಿದರು. ಶ್ರೀನಿವಾಸಪುರದ ಮಾಜಿ ಶಾಸಕರಿಗೆ ಇದು ಗೊತ್ತಿರಲಿಲ್ಲವೇ ಎಂದು ಕಿಡಿ ಕಾರಿದರು.
ಬೆಂಗಳೂರಿನ ರೊಚ್ಚು ನೀರಿನಿಂದ ಸಣ್ಣ ಮಕ್ಕಳು ಕಾಯಿಲೆಗೆ ತುತ್ತಾಗುತ್ತಿದ್ದಾರೆ. ನದಿಯ ನೀರು ಕೊಡುತ್ತೇವೆ ಎಂದು ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಸಂಘ ಸಂಸ್ಥೆಗಳ ವರದಿಗಳು ಹಾನಿಯನ್ನು ತೋರಿಸಿವೆ ಎಂದರು.
ಹಿಂದೆ ಈ ಭಾಗದ ತರಕಾರಿಗಳು ದೇಶ-ವಿದೇಶಗಳಲ್ಲಿ ಪೈಪೋಟಿ ನಡೆಸುತ್ತಿದ್ದವು. ಇಂದು ಕೇಳುವವರೇ ಇಲ್ಲ. 2027ಕ್ಕೆ ಎತ್ತಿನಹೊಳೆ ನೀರು ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಯಂತ್ರೋಪಕರಣಗಳು ತುಕ್ಕು ಹಿಡಿದಿವೆ. ಜನರೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಟೀಕಿಸಿದರು.
ಯರಗೋಳ್ ಯೋಜನೆಯನ್ನು ತಾವು ತೀರ್ಮಾನಿಸಿದ್ದು, ಆದರೆ ಅದಕ್ಕೂ ಕೆಸಿ ವ್ಯಾಲಿಯ ರೊಚ್ಚು ನೀರು ಹರಿಸುತ್ತಿದ್ದಾರೆ ಎಂದು ಹೇಳಿದರು. ಎತ್ತಿನಹೊಳೆ ದುಡ್ಡು ಹೊಡೆಯುವ ಕಾರ್ಯಕ್ರಮ ಎಂದು ಶಂಕುಸ್ಥಾಪನೆ ದಿನವೇ ಹೇಳಿದ್ದು ಸತ್ಯವಾಗಿದೆ ಎಂದರು.
ಈ ಸರ್ಕಾರಕ್ಕೆ ನೀರು ಕೊಡಲು ಇನ್ನೆಷ್ಟು ದಿನ ಬೇಕು? ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಪ್ರಶ್ನಿಸಿದರು. 140 ಶಾಸಕರು ಗೆದ್ದು ಕೊಟ್ಟರು ಆದರೆ ಕುರ್ಚಿ ಕಿತ್ತಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಬೆರಳು ಮಾಡುತ್ತಾರೆ. ರಾಜ್ಯದ ಕೆಲಸಗಳಿಗೆ ಸಿಎಂ, ಡಿಸಿಎಂ ಸಚಿವರು ಭೇಟಿ ಮಾಡಿಲ್ಲ. ಆದರೂ ನಮ್ಮ ಕೆಲಸ ಮಾಡುತ್ತಿದ್ದೇವೆ. ಮಾವಿ ಬೆಂಬಲ ಬೆಲೆ ನೀಡಿದ್ದೇವೆ, ತಂಬಾಕು-ತೆಂಗು ಬೆಳೆಗಾರರ ಹಿತರಕ್ಷಣೆ ಮಾಡಿದ್ದೇವೆ ಎಂದರು.
ರಮೇಶ್ ಕುಮಾರ್‌ಗೆ ನೋಟಿಸ್; ಸಂಬಂಧವಿಲ್ಲ ಎಂದ ಹೆಚ್‌ಡಿಕೆ
ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿದ್ದಕ್ಕೆ ತಮಗೆ ಯಾವ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಬಿಡದಿಯಲ್ಲಿ ತಮಗೂ ನೋಟಿಸ್ ಕೊಟ್ಟು ಕಾಟ ನೀಡುತ್ತಿದ್ದಾರೆ. ರಮೇಶ್ ಕುಮಾರ್ ಕಾರಣ ಎಂದರೆ ಆಗುತ್ತದೆಯೇ? ತಮಗೆ ಎಸ್‌ಐಟಿ ರಚಿಸಿದ್ದಾರೆ, ಅವರಿಗೆ ಯಾಕಿಲ್ಲ? ಕೋರ್ಟುಗಳಿವೆ, ಹೋರಾಟ ಮಾಡಲಿ ಎಂದು ಟಾಂಗ್ ಕೊಟ್ಟರು.
ಸೀಟು ಹಂಚಿಕೆ ಮಾತುಕತೆ ನಡೆದಿಲ್ಲ
ಮಂಡ್ಯ ಅಥವಾ ರಾಜ್ಯದ ಯಾವುದೇ ಕ್ಷೇತ್ರದ ಸೀಟು ಹಂಚಿಕೆ ಮಾತುಕತೆ ನಡೆದಿಲ್ಲ. ಇನ್ನೂ ಸಮಯವಿದೆ. ಬಿಜೆಪಿಯೊಂದಿಗೆ ಮಾತಿನ ಮೂಲಕ ತೀರ್ಮಾನ ಕೈಗೊಳ್ಳುತ್ತೇವೆ. ಜಿಲ್ಲಾ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗೆ ಆದ್ಯತೆ ನೀಡಿದ್ದೇವೆ ಎಂದರು.
ಸಂಸದ ಮಲ್ಲೇಶ್ ಬಾಬು, ಶಾಸಕರು ಜಿ.ಕೆ. ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಇಂಚರ ಗೋವಿಂದರಾಜು, ಮೇಲೂರು ರವಿ, ಮಾಜಿ ಶಾಸಕರು ಚೌಡರೆಡ್ಡಿ ತೂಪಲ್ಲಿ, ಹೆಚ್.ಎಂ. ರಮೇಶ್ ಗೌಡ, ಡಾ. ಕೆ. ಅನ್ನದಾನಿ ಮುಂತಾದವರು ಹಾಜರಿದ್ದರು.












