ಬೆಂಗಳೂರು: ಕೃಷಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026 ಹಾಗೂ ಉತ್ಪಾದನೋತ್ತರ ಕೃಷಿ-ರೈತರ ಸಬಲೀಕರಣ ಕಾರ್ಯಕ್ರಮದ ಸಮಾರೋಪ ಸಮಾರಂಭ ಭಾನುವಾರ (ಫೆಬ್ರವರಿ 8, 2026) ನಡೆಯಲಿದೆ.
ಮಧ್ಯಾಹ್ನ 12.00 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಶಿವರಾಜ್ ಸಿಂಗ್ ಚೌಹಾಣ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕೇಂದ್ರ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕಾರ್ಮಿಕ ಉದ್ಯೋಗ ಖಾತೆ ರಾಜ್ಯ ಸಚಿವ ಕು. ಶೋಭಾ ಕರಂದ್ಲಾಜೆ ಇನ್ನೊಬ್ಬ ಮುಖ್ಯ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ.
ಕರ್ನಾಟಕ ಸರ್ಕಾರದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಘನ ಉಪಸ್ಥಿತರಾಗಿ ಭಾಗವಹಿಸಲಿದ್ದು, ಅವರು ಈ ಮೇಳದ ಉಸ್ತುವಾರಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಉತ್ಪಾದನೋತ್ತರ ಕೃಷಿ ಕ್ಷೇತ್ರದಲ್ಲಿ ರೈತರ ಸಬಲೀಕರಣಕ್ಕೆ ಸಂಬಂಧಿಸಿದ ವಿವಿಧ ಸಾಧನೆಗಳು, ಯೋಜನೆಗಳು ಮತ್ತು ಭವಿಷ್ಯದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಮೂಲಕ ಕರ್ನಾಟಕದ ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳು ದೊರೆಯುವ ಅವಕಾಶಗಳ ಬಗ್ಗೆಯೂ ಗಮನ ಸೆಳೆಯಲಾಗುತ್ತಿದೆ.
ಎಲ್ಲಾ ಸಂಬಂಧಿತ ಅಧಿಕಾರಿಗಳು, ರೈತರು, ಕೃಷಿ ತಜ್ಞರು, ವ್ಯಾಪಾರಸ್ಥರು ಹಾಗೂ ಮಾಧ್ಯಮ ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.












