ಬೆಂಗಳೂರು: ಕಂದಾಯ ಇಲಾಖೆಯಡಿ ಕಂದಾಯ ಗ್ರಾಮಗಳಲ್ಲಿ ದಾಖಲೆ ರಹಿತ ವಸತಿ ಪ್ರದೇಶಗಳ ಫಲಾನುಭವಿಗಳಿಗೆ ಮಾಲೀಕತ್ವ ಭದ್ರತೆ ನೀಡುವ ಉದ್ದೇಶದಿಂದ ಹಾವೇರಿ ಜಿಲ್ಲೆಯಲ್ಲಿ ಫೆಬ್ರವರಿ 14, 2026 ರಂದು ಬೃಹತ್ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ಉದ್ದೇಶಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಇಂದು (ಫೆಬ್ರವರಿ 10, 2026) ಬೆಂಗಳೂರಿನ ವಿಕಾಸಸೌಧದಲ್ಲಿ ಫಲಾನುಭವಿಗಳು, ಹಾವೇರಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಸಂವಾದ ಹಾಗೂ ಮಾಧ್ಯಮಗೋಷ್ಠಿ ಆಯೋಜಿಸಲಾಗಿತ್ತು. ಮೊದಲು ಕೊಠಡಿ ಸಂಖ್ಯೆ 123 ಘೋಷಿಸಲಾಗಿದ್ದ ಸ್ಥಳವನ್ನು ನಂತರ ಕೊಠಡಿ ಸಂಖ್ಯೆ 318ಕ್ಕೆ ಬದಲಾಯಿಸಲಾಗಿದೆ. ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ.
ರಾಜ್ಯ ಸರ್ಕಾರದ ಎರಡೂವರೆ ವರ್ಷಗಳ ಅವಧಿಯಲ್ಲಿ ತಾಂಡಾ, ಹಟ್ಟಿ ಮುಂತಾದ ದಾಖಲೆರಹಿತ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ 1.10 ಲಕ್ಷಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಹಿಂದಿನ ವರ್ಷ ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 1.11 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿತ್ತು. ಇದೀಗ ಹಾವೇರಿಯಲ್ಲಿ ಮತ್ತೊಂದು ಬೃಹತ್ ಕಾರ್ಯಕ್ರಮದ ಮೂಲಕ ಇನ್ನಷ್ಟು ಜನರಿಗೆ ಭೂಮಿ ಮಾಲೀಕತ್ವದ ದಾಖಲೆ ನೀಡುವ ಗುರಿ ಹೊಂದಲಾಗಿದೆ.
ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಪಾರದರ್ಶಕ ಸೇವೆ ಒದಗಿಸುವುದು ಮತ್ತು ಮಧ್ಯವರ್ತಿಗಳ ಹಾವಳಿಯನ್ನು ಕಡಿಮೆ ಮಾಡುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಒತ್ತಿ ಹೇಳಿದರು.
ಎಲ್ಲಾ ಮಾಧ್ಯಮ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸುವಂತೆ ಕೋರಲಾಗಿದೆ.












