ದೆಹಲಿ: ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ವಂದೇ ಮಾತರಂ ಗೀತೆಗೆ ಬುನಾದಿ ಹಾಕಿದ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.
“ವಂದೇ ಮಾತರಂಗೆ ಬುನಾದಿ ಹಾಕಿದ ಪಕ್ಷ ನಮ್ಮದು. ಈ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ ಹಾಗೂ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ನಮ್ಮದು. ದೇಶ ಸೇವೆ ಮಾಡಿದ ಪಕ್ಷ ನಮ್ಮದು. ಈಗ ಬಿಜೆಪಿ ಸೇರಿದಂತೆ ಬೇರೆಯವರು ನಮ್ಮನ್ನು ಅನುಸರಿಸುತ್ತಿದ್ದಾರೆ. ಅದೇ ನಮಗೆ ಸಂತೋಷ” ಎಂದು ಅವರು ಪರೋಕ್ಷವಾಗಿ ಬಿಜೆಪಿಗೆ ಕೌಂಟರ್ ನೀಡಿದರು.
ರಾಷ್ಟ್ರಗೀತೆಗೆ ನೀಡುವ ಗೌರವವನ್ನು ವಂದೇ ಮಾತರಂಗೂ ನೀಡಬೇಕು ಮತ್ತು ಇದನ್ನು ಕಡ್ಡಾಯಗೊಳಿಸುವ ಬಗ್ಗೆ ಪ್ರಶ್ನಿಸಿದಾಗ, ಶಿವಕುಮಾರ್ ಅವರು “ನಮ್ಮ ಕಾರ್ಯಕ್ರಮಗಳನ್ನು ಪ್ರಾರಂಭಿಸುವಾಗ ಪ್ರತಿ ಹಂತದಲ್ಲೂ ವಂದೇ ಮಾತರಂ ಹಾಡುತ್ತೇವೆ. ನಾವು ಅದಕ್ಕೆ ಗೌರವ ನೀಡುತ್ತೇವೆ ಮತ್ತು ಅನುಸರಿಸುತ್ತೇವೆ” ಎಂದು ತಿಳಿಸಿದರು.
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಕುವೆಂಪು ರಚಿತ ಜಯ ಭಾರತ ಜನನಿಯ ತನುಜಾತೆಯನ್ನು ರಾಜ್ಯಗೀತೆಯಾಗಿ ಕಡ್ಡಾಯಗೊಳಿಸಿದ್ದನ್ನು ಉಲ್ಲೇಖಿಸಿ, ಅದರಲ್ಲಿ “ಸರ್ವಜನಾಂಗದ ಶಾಂತಿಯ ತೋಟ” ಎಂಬ ಸಾಲು ಇದೆ ಎಂದು ಹೇಳಿದರು. “ನಮ್ಮದು ಸರ್ವಜನಾಂಗದ ಶಾಂತಿಯ ತೋಟ. ಹಿಂದೂ, ಕ್ರೈಸ್ತ, ಮುಸಲ್ಮಾನ ಎಂದು ಹಾಡಿನಲ್ಲೇ ಇದೆ. ಅಂತಹ ಭೂಮಿಯಲ್ಲಿ ಬೆಳೆದವರು ನಾವು” ಎಂದು ಅವರು ವಿವರಿಸಿದರು.
ಈಗ ಎರಡು ರಾಷ್ಟ್ರಗೀತೆಗಳಾಗುತ್ತವೆ ಎಂಬ ಪ್ರಶ್ನೆಗೆ “ಅದರ ಬಗ್ಗೆ ಆನಂತರ ಮಾತನಾಡೋಣ” ಎಂದು ಅವರು ಸ್ಪಷ್ಟಪಡಿಸಿದರು.
ಮತ್ತೊಂದೆಡೆ, ಡಿ.ಕೆ. ಸುರೇಶ್ ಅವರು ಸಿದ್ದರಾಮಯ್ಯ ಅವರು ಕೊಟ್ಟ ಮಾತನ್ನು ಸ್ವಲ್ಪ ನಿಧಾನವಾದರೂ ಉಳಿಸಿಕೊಳ್ಳಲಿದ್ದಾರೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಕಾಲವೇ ಉತ್ತರ ನೀಡುತ್ತದೆ ಎಂದು ಹೇಳಿದ್ದೇನೆ. ನಾವು ಏನು ಮಾತನಾಡಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತು” ಎಂದರು. ಕಾಲ ಯಾವಾಗ ಬರಲಿದೆ ಎಂಬ ಪ್ರಶ್ನೆಗೆ “ಇದಕ್ಕೂ ಸಮಯ ನೋಡಿ ಹೇಳುತ್ತೇನೆ” ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಪ್ರಿಯಾಂಕ ಗಾಂಧಿ ಅವರನ್ನು ಭೇಟಿಯಾದ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಕಚೇರಿಗೆ ಹೋಗಿ ಬಂದಿದ್ದೇನೆ ಅಷ್ಟೇ. ಇದೀಗ ಅಸ್ಸಾಂ ಚುನಾವಣೆ ಜಂಜಾಟದಲ್ಲಿದ್ದೇನೆ. ವಿಭಿನ್ನ ವಿಚಾರಗಳನ್ನು ಯಾಕೆ ಚರ್ಚಿಸಬೇಕು? ಮುಂದೆ ಮಾತನಾಡುತ್ತೇನೆ. ಸಮಯ ಉತ್ತರ ನೀಡಲಿದೆ” ಎಂದು ಹೇಳಿದರು.
ಶಿವಕುಮಾರ್ ಅವರು ಪ್ರಸ್ತುತ ಅಸ್ಸಾಂ ಚುನಾವಣೆ ಸಂಬಂಧಿತ ಸಭೆಗಳಲ್ಲಿ ಭಾಗವಹಿಸುತ್ತಿದ್ದು, ದೆಹಲಿ ಪ್ರವಾಸದ ಸಂದರ್ಭದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ.












