ಬೆಂಗಳೂರು: ಭಾರತ-ಫ್ರಾನ್ಸ್ ರಕ್ಷಣಾ ಸಹಕಾರದ ಭಾಗವಾಗಿ ಕೋಲಾರ ಜಿಲ್ಲೆಯ ವೇಮಗಲ್ ಗ್ರಾಮದಲ್ಲಿ ನಡೆಯುತ್ತಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಫ್ರಾನ್ಸ್‌ನ ರಕ್ಷಣಾ ಸಚಿವೆ ಶ್ರೀಮತಿ ಕ್ಯಾಥರಿನ್ ವೌಟ್ರಿನ್ ಅವರು ಇಂದು ಬೆಂಗಳೂರಿಗೆ ಆಗಮಿಸಿದರು.
ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಹಿಂಡೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರಿಗೆ ಭಾರತೀಯ ಸೇನೆಯ ವಿವಿಧ ಪಡೆಗಳು ಗೌರವ ವಂದನೆ ಸಲ್ಲಿಸಿದವು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ TASL ಸೌಲಭ್ಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿದ ಕ್ಯಾಥರಿನ್ ವೌಟ್ರಿನ್ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರು ವರ್ಚುವಲ್‌ನಲ್ಲಿ ಉದ್ಘಾಟಿಸುವ ಏರ್‌ಬಸ್ H125 ಹೆಲಿಕಾಪ್ಟರ್‌ಗಳ ಫೈನಲ್ ಅಸೆಂಬ್ಲಿ ಲೈನ್ (FAL) ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದು ಭಾರತದಲ್ಲಿ ಖಾಸಗಿ ವಲಯದ ಮೊದಲ ಹೆಲಿಕಾಪ್ಟರ್ ಅಸೆಂಬ್ಲಿ ಘಟಕವಾಗಿದ್ದು, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಮತ್ತು ಏರ್‌ಬಸ್ ಸಹಯೋಗದಲ್ಲಿ ನಿರ್ಮಿಸಲಾಗಿದೆ.

ಈ ಕಾರ್ಯಕ್ರಮದ ನಂತರ ಸಂಜೆ ಅವರು ನವದೆಹಲಿಗೆ ಮರಳುವ ನಿರೀಕ್ಷೆಯಿದೆ. ಈ ಭೇಟಿಯು ಭಾರತ-ಫ್ರಾನ್ಸ್ ನಡುವಿನ ರಕ್ಷಣಾ ಸಹಕಾರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಇದು ಕ್ಯಾಥರಿನ್ ವೌಟ್ರಿನ್ ಅವರ ಭಾರತಕ್ಕೆ ಮೊದಲ ಭೇಟಿಯಾಗಿದ್ದು, ಎರಡೂ ದೇಶಗಳ ನಡುವೆ ರಕ್ಷಣಾ ಸಹಕಾರ ಒಪ್ಪಂದವನ್ನು ಮತ್ತಷ್ಟು 10 ವರ್ಷಗಳಿಗೆ ವಿಸ್ತರಿಸುವುದು ಸೇರಿದಂತೆ ಹಲವು ಮಹತ್ವದ ಚರ್ಚೆಗಳು ನಡೆದಿವೆ.
ಈ ಸಂದರ್ಭದಲ್ಲಿ ಏರ್‌ಬಸ್ H125 ಹೆಲಿಕಾಪ್ಟರ್‌ಗಳ ಉತ್ಪಾದನೆಯ ಮೂಲಕ ಭಾರತದಲ್ಲಿ ಸ್ವದೇಶಿ ರಕ್ಷಣಾ ಉತ್ಪಾದನೆಗೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಮೊದಲ ಮೇಡ್ ಇನ್ ಇಂಡಿಯಾ H125 ಹೆಲಿಕಾಪ್ಟರ್‌ನ ವಿತರಣೆ 2027ರ ಆರಂಭದಲ್ಲಿ ನಿರೀಕ್ಷಿಸಲಾಗಿದೆ.












