ಮಂಡ್ಯ: ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ದಿವಾಳಿ ಮಾಡಿ ಪಾಪರ್ ರಾಜ್ಯವನ್ನಾಗಿ ಮಾಡುವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ವಿವಿಧ ವರ್ಗಗಳು ಪ್ರತಿಭಟನೆ ನಡೆಸುತ್ತಿರುವುದನ್ನು ಉಲ್ಲೇಖಿಸಿ, ಭ್ರಷ್ಟಾಚಾರ, ಅನುದಾನ ಕೊರತೆ ಮತ್ತು ಆಡಳಿತ ವೈಫಲ್ಯಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಆರೋಪಿಸಿದರು.
ಮಂಡ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ 1,000 ದಿನಗಳ ಅವಧಿಯಲ್ಲಿ ಸಾವಿರಾರು ಸಮಸ್ಯೆಗಳು ಉಂಟಾಗಿವೆ ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ಖರೀದಿ ಬಾಕಿ ಇದ್ದು, ಸ್ಥಳೀಯ ವೈದ್ಯಾಧಿಕಾರಿಗಳು ಔಷಧ ಖರೀದಿಸದಂತೆ ಸುತ್ತೋಲೆ ಹೊರಡಿಸಲಾಗಿದೆ. ಮಾರ್ಚ್ 13ರಿಂದ ಸರ್ಕಾರಿ ವೈದ್ಯರು ಪ್ರತಿಭಟನೆಗೆ ಮುಂದಾಗಿದ್ದು, ಇದರಿಂದ ರೋಗಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಇದಕ್ಕೆ ನೇರ ಕಾರಣ ಎಂದು ಆರೋಪಿಸಿದರು.
ಆರೋಗ್ಯ ಇಲಾಖೆಗೆ ಬಜೆಟ್‌ನಲ್ಲಿ 40% ಅನುದಾನ ಕಡಿತಗೊಂಡಿದ್ದು, ಗ್ಯಾರಂಟಿ ಯೋಜನೆಗಳು ಹೊರೆಯಾಗುತ್ತಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡಿದ್ದಾರೆ ಎಂದು ಅಶೋಕ್ ಉಲ್ಲೇಖಿಸಿದರು. ಇ-ಖಾತಾ ಮಾಡಿಸಲು 30,000 ರೂ. ಲಂಚ ಬೇಕು ಎಂಬ ಆರೋಪ ಮಾಡಿದ್ದು, ಅಬಕಾರಿ ಇಲಾಖೆಯಲ್ಲಿ ಮದ್ಯದಂಗಡಿ ಪರವಾನಗಿಗೆ ಕೋಟಿಗಟ್ಟಲೆ ಹಣ ಕೇಳಲಾಗುತ್ತಿದೆ ಎಂದರು. ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಹಣ ಸಂಗ್ರಹಿಸಲಾಗುತ್ತಿದ್ದು, ಕರ್ನಾಟಕವನ್ನು ಕಾಂಗ್ರೆಸ್ ಹೈಕಮಾಂಡ್‌ನ ಎಟಿಎಂ ಆಗಿ ಮಾಡಿಕೊಳ್ಳಲಾಗಿದೆ ಎಂದು ಟೀಕಿಸಿದರು.
ಅಂಗನವಾಡಿ ಕಾರ್ಯಕರ್ತರು, ಗುತ್ತಿಗೆದಾರರು, ಸಾರಿಗೆ ನೌಕರರು ಸೇರಿದಂತೆ ವಿವಿಧ ವರ್ಗಗಳು ಪ್ರತಿಭಟನೆ ನಡೆಸುತ್ತಿರುವುದನ್ನು ಉಲ್ಲೇಖಿಸಿ, ಅಂಗನವಾಡಿ ಮಕ್ಕಳಿಗೆ ತರಕಾರಿ ಖರೀದಿಗೆ ಪ್ರತಿ ಮಗುವಿಗೆ ಕೇವಲ 50 ಪೈಸೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಹತ್ತು ಮಕ್ಕಳಿಗೆ 5 ರೂಪಾಯಿ ನೀಡಲಾಗುತ್ತದೆ. ಅರ್ಧ ಕೆಜಿ ತರಕಾರಿಯನ್ನು ಹತ್ತು ಮಕ್ಕಳಿಗೆ ವಿಂಗಡಿಸಬೇಕಾಗುತ್ತದೆ. ಆದರೆ ಒಂದು ಕೆಜಿ ತರಕಾರಿಗೆ ಕನಿಷ್ಠ 40 ರೂಪಾಯಿ ಬೆಲೆ ಇದೆ. ಗ್ಯಾರಂಟಿಗಳಿಂದಾಗಿ ಹಣವಿಲ್ಲದೆ ಇಷ್ಟು ಕಡಿಮೆ ದರದಲ್ಲಿ ಖರೀದಿ ಮಾಡಬೇಕಾಗಿದೆ,” ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರುವರೆ ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದು, ಐದು ವರ್ಷಗಳಲ್ಲಿ ಸಾಲ 6 ಲಕ್ಷ ಕೋಟಿಗೆ ಏರಲಿದೆ ಎಂದು ಹೇಳಿದರು. ಪ್ರತಿ ವ್ಯಕ್ತಿಗೆ 1 ಲಕ್ಷ ರೂಪಾಯಿ ಸಾಲ ಇದ್ದು, ಮತ್ತೊಂದು 1 ಲಕ್ಷ ಹೇರಲಾಗುತ್ತಿದೆ. ತುಪ್ಪ, ಮಾರ್ಗಸೂಚಿ ದರ, ಕಸ ತೆರಿಗೆ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಬಜೆಟ್ ಅಧಿವೇಶನದಲ್ಲಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸಲಿದ್ದು, ಹಿಂದುಳಿದ ತಾಲೂಕುಗಳ ಸಂಖ್ಯೆ ಹೆಚ್ಚಾಗಿದೆ, ವಿದ್ಯಾರ್ಥಿಗಳ ಹೋರಾಟದಿಂದ 56 ಸಾವಿರ ನೇಮಕಾತಿ ಘೋಷಣೆ ಮಾಡಲಾಗಿದೆ ಎಂದರು. ಕೊಡಗು, ಬಾಗಲಕೋಟೆ ಸೇರಿದಂತೆ ಹಿಂದೂ ಕಾರ್ಯಕ್ರಮಗಳ ಮೇಲೆ ದಾಳಿ ನಡೆಯುತ್ತಿದ್ದು, ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ಕುರ್ಚಿ ಬಿಡುವುದಿಲ್ಲ ಎಂದು ಹೇಳಿ, ಡಿ.ಕೆ. ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಲು ಯತ್ನ ನಡೆಯುತ್ತಿದೆ ಎಂದರು.
ರಾಜ್ಯದಲ್ಲಿ ಎಲ್ಲಾ ಹಗರಣಗಳ ವಿರುದ್ಧ ಹೋರಾಟ ಮುಂದುವರೆಸುವುದಾಗಿ ಅಶೋಕ್ ಘೋಷಿಸಿದರು.











