. ಫೋನ್ ಕದ್ದಾಲಿಕೆ ಆರೋಪದ ಹಿನ್ನೆಲೆಯಲ್ಲಿ ಸಿಎಂ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಫೋನ್ ಕದ್ದಾಲಿಕೆ ವಿವಾದ ತಾರಕಕ್ಕೇರಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಫೋನ್ ಕದ್ದಾಲಿಕೆ ಆರೋಪಕ್ಕೆ ಸಿಎಂ ನೀಡಿದ ಪ್ರತಿಕ್ರಿಯೆಯನ್ನು ಖಂಡಿಸಿ, ಮಾಧ್ಯಮ ಹೇಳಿಕೆಯ ಮೂಲಕ ನೇರವಾಗಿ ತಮ್ಮನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯಲ್ಲಿ, “ನಾನು ಎರಡು ಬಾರಿ ಅಧಿಕಾರ ಕಳೆದುಕೊಂಡವನು. ಇತಿಹಾಸ ಮೌನವಾಗಿರುವುದಿಲ್ಲ ಎಂಬುದು ನಿಮಗೂ ಗೊತ್ತು. ನಾನು ಫೋನ್ ಕದ್ದಾಲಿಕೆ ಮಾಡಿದ್ದರೆ ಅಧಿಕಾರ ಉಳಿಸಿಕೊಳ್ಳುತ್ತಿದ್ದೆ. ಸಿದ್ದವನದಲ್ಲಿ ಕಬ್ಬೆಕ್ಕಿನ ಕರಾಮತ್ತು ಏನು ನಡೆಯಿತು ಎಂಬುದನ್ನು ಪತ್ತೆಹಚ್ಚುತ್ತಿದ್ದೆ. ಆದರೆ ಅದು ನನ್ನ ಗುಣವಲ್ಲ. ಕದ್ದಾಲಿಕೆ ಕಾಂಗ್ರೆಸ್ ಪಕ್ಷದ ಆವಿಷ್ಕಾರ” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಮುಖ್ಯಮಂತ್ರಿಗಳು ಕೆಲಸಕ್ಕಿಂತ ಕೌಂಟರ್ ಕೊಡುವುದರಲ್ಲೇ ಹೆಚ್ಚು ತೊಡಗಿರುವುದನ್ನು ಖಂಡಿಸಿ, “ಕುಂಬಳಕಾಯಿ ಕಳ್ಳ ಎಂದರೆ ನಾನೇ… ಹೆಗಲು ಮುಟ್ಟಿಕೊಂಡರೆ ನಾನೇನು ಮಾಡಲಿ?” ಎಂದು ಟಾಂಗ್ ನೀಡಿದ್ದಾರೆ. ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳೇ ಮಾತನಾಡುತ್ತಿವೆ ಎಂದು ಹೇಳಿ, ಸಿಎಂ ಅವರ ಆಡಳಿತಕ್ಕಿಂತ ಇತರರನ್ನು ಆಡಿಕೊಳ್ಳುವುದರಲ್ಲೇ ಆಸಕ್ತಿ ಇದೆ ಎಂದು ಆರೋಪಿಸಿದ್ದಾರೆ.
ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ:
ಪ್ರತಿಪಕ್ಷಗಳು ಮತ್ತು ಮಾಧ್ಯಮಗಳ ಅನುಮಾನದಂತೆ ಫೋನ್ ಕದ್ದಾಲಿಕೆ ಕಾಂಗ್ರೆಸ್‌ನ ಆಂತರಿಕ ಕುರ್ಚಿ ಕಾಳಗದ ಮುಂದುವರಿದ ಭಾಗ ಎಂದು ಕುಮಾರಸ್ವಾಮಿ ಹೇಳಿದ್ದಾರೆ. “ಪ್ರಜಾಪ್ರಭುತ್ವ ಎಂದರೆ ಶಾಸಕರು ಬೀದಿಯಲ್ಲಿ ಮುಖ್ಯಮಂತ್ರಿಯನ್ನು ಬೈಯುವುದಲ್ಲ. ಆಂತರಿಕ ಪ್ರಜಾಪ್ರಭುತ್ವದ ವ್ಯಾಸ-ತ್ರಿಜ್ಯ ಅಳೆಯುವ ತೆವಲು ನನಗಿಲ್ಲ. ಕಾಂಗ್ರೆಸ್ ನೂರು ವರ್ಷ ತುಂಬಿದರೂ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಹೇಳಿಕೊಳ್ಳುತ್ತದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ, “ನಿಮ್ಮ ಕುಚುಕು ಗೆಳೆಯನಿಗಾಗಿ ಮಾತು ಉಳಿಸಿಕೊಳ್ಳಿ ಮಿಸ್ಟರ್ ಅಗ್ರಿಮೆಂಟ್ ರಾಮಯ್ಯ. ನಿಮ್ಮ ಸ್ನೇಹ ಚಿರಾಯುವಾಗಲಿ” ಎಂದು ವ್ಯಂಗ್ಯ ಮಾಡಿದ್ದಾರೆ. ಹಿಂದೆ ದೇವೇಗೌಡರನ್ನು ಎಳೆದು ತರುವುದನ್ನು ಖಂಡಿಸಿ, ಸಿದ್ದರಾಮಯ್ಯ ಅವರ ಹಳೆಯ ಹೇಳಿಕೆಗಳನ್ನು ಜ್ಞಾಪಿಸಿದ್ದಾರೆ.
“ನನ್ನ ಜೊತೆ ನೇರ ಸಂಘರ್ಷಕ್ಕೆ ಬಂದಾಗಲೆಲ್ಲಾ ದೇವೇಗೌಡರನ್ನು ಎಳೆದು ತರುತ್ತೀರಿ. ದೇವೇಗೌಡರು ನಿಮ್ಮನ್ನು ಬೆಳೆಸಿದರು, ಆದರೆ ನೀವು ಗುರುವಿಗೆ ಗುನ್ನ ಇಟ್ಟಿರಿ” ಎಂದು ಆರೋಪಿಸಿದ್ದಾರೆ. ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ವಿವರಿಸಿ, ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದ್ದಾರೆ.
ಈ ವಾಗ್ದಾಳಿ ರಾಜ್ಯದಲ್ಲಿ ಸಿಎಂ-ಡಿಸಿಎಂ ನಡುವಿನ ಕುರ್ಚಿ ಸಮರದ ಹಿನ್ನೆಲೆಯಲ್ಲಿ ನಡೆದಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.











