ಬೆಂಗಳೂರು: ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ಬಾರಿ 1.15 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿ ಬಜೆಟ್ ಮಂಡಿಸಲು ಸಿದ್ದರಾಗಿರುವುದನ್ನು ಖಂಡಿಸಿ, ಇದನ್ನು “ಸಾಲದ ಬಜೆಟ್” ಎಂದು ಕರೆದರು. ಜನರ ಮೇಲೆ ತೆರಿಗೆಗಳ ಹೊರೆ ಹೆಚ್ಚಿಸುವುದು ಖಚಿತ ಎಂದು ಅವರು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, “ಸಿದ್ದರಾಮಯ್ಯ ಎಂದರೆ ತೆರಿಗೆ ಹೇರುವ ರಾಮಯ್ಯ ಆಗಿದ್ದಾರೆ. ಕೇಂದ್ರದಲ್ಲಿ ನಿರ್ಮಲಾ ಸೀತಾರಾಮನ್ ತೆರಿಗೆಗಳನ್ನು ಕಡಿಮೆ ಮಾಡಿದ್ದಾರೆ. ಆದರೆ ಇಲ್ಲಿ ತಿಂಗಳಿಗೊಮ್ಮೆ ತೆರಿಗೆ ಹಾಕುತ್ತಿದ್ದಾರೆ. ಈಗಾಗಲೇ 36 ತೆರಿಗೆಗಳನ್ನು ಜನರ ಮೇಲೆ ಹೇರಿದ್ದಾರೆ” ಎಂದರು.
ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಈಗ ತೆರಿಗೆ ಹೊರೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಿದ್ದರಾಮಯ್ಯನವರ ಅವಧಿ ಮುಗಿಯುವ ವೇಳೆಗೆ ರಾಜ್ಯದ ಒಟ್ಟು ಸಾಲ 8 ಲಕ್ಷ ಕೋಟಿ ರೂಪಾಯಿಗಳನ್ನು ಮೀರಲಿದೆ ಎಂದು ಹೇಳಿದರು. ಇದರಿಂದ ಆರ್ಥಿಕ ಶಿಸ್ತು ಮೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಆದಾಯವನ್ನು ಸೃಷ್ಟಿಸದೆ ಜಿಡಿಪಿಗೆ ಹೋಲಿಕೆ ಮಾಡಿ ಸಾಲದ ಪ್ರಮಾಣವನ್ನು ಕಡಿಮೆ ತೋರಿಸುತ್ತಿದೆ ಎಂದು ಆರೋಪಿಸಿದ ಅಶೋಕ್, “ಬಜೆಟ್ ಎಂದರೆ ಆದಾಯ ಹೆಚ್ಚಿಸಿ ಜನರಿಗೆ ಹೊರೆಯಾಗದಂತೆ ನಡೆಸಬೇಕು. ಆದರೆ ಸಾಲ ಮಾಡಿ ಸರ್ಕಾರ ನಡೆಸುತ್ತಿದ್ದಾರೆ” ಎಂದರು.
ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಲ ಇಲ್ಲದ ಬಜೆಟ್ ಮಂಡಿಸಿದ್ದರು ಮತ್ತು 24,400 ಕೋಟಿ ರೂ. ಸಾಲ ಪಡೆಯುವ ಅವಕಾಶವಿದ್ದರೂ ಪಡೆದಿರಲಿಲ್ಲ ಎಂದು ಹೋಲಿಕೆ ಮಾಡಿದರು. ಕಾಂಗ್ರೆಸ್ ಸರ್ಕಾರ ಪ್ರತಿ ವರ್ಷ ಸಾಲ ಪಡೆಯುತ್ತಲೇ ಇದೆ ಎಂದು ಟೀಕಿಸಿದರು.
ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಪ್ರತಿ ವರ್ಷ 15,000 ಕೋಟಿ ರೂ. ಮೀಸಲಿಡಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಉಲ್ಲೇಖಿಸಿ, ಈ ಬಜೆಟ್‌ನಲ್ಲಿ ಇಷ್ಟು ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿದರು.
ಕೆಪಿಎಸ್‌ಸಿ ಬಗ್ಗೆ ತೀವ್ರ ಆರೋಪ ಮಾಡಿದ ಅಶೋಕ್, “ಕೆಪಿಎಸ್‌ಸಿ ಎಂದರೆ ಕಳ್ಳರ ದಂಧೆಯ ಕೇಂದ್ರ. ಹಣ ಕೊಡದಿದ್ದರೆ ಕಚೇರಿಯೊಳಗೆ ಬಿಡುವುದಿಲ್ಲ. ಕುಟುಂಬ, ಜಾತಿ ಮಾನದಂಡವಾಗಿದೆ, ಅಂಕ-ಪ್ರತಿಭೆ ಅಲ್ಲ. ಕೆಪಿಎಸ್‌ಸಿ ಮುಚ್ಚಿ ಯುಪಿಎಸ್‌ಸಿ ಮಾದರಿಯ ಸಂಸ್ಥೆ ನಿರ್ಮಿಸಬೇಕು” ಎಂದು ಹೇಳಿದರು. ಇದರ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುವುದಾಗಿ ತಿಳಿಸಿದರು.
ಸರ್ಕಾರದಲ್ಲಿ ತೆರಿಗೆ ಸಂಗ್ರಹ 48% ಮಾತ್ರ ಸಾಧನೆಯಾಗಿದೆ, ಅನುದಾನ ಬಿಡುಗಡೆಯಲ್ಲಿ ವಿಫಲತೆ ಇದೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಹುದ್ದೆಗಾಗಿ ಕಚ್ಚಾಟ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು. ಬಜೆಟ್‌ನಲ್ಲಿ ಪ್ರಧಾನಿ ಮೋದಿಯವರನ್ನು ಟೀಕಿಸುವ ಅಂಶಗಳಿರುತ್ತವೆ ಎಂದು ಹೇಳಿದರು.












