ಬೆಳಗಾವಿ: ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳು ಅಹಿಂಸೆ, ಕರುಣೆ, ಸಹಿಷ್ಣುತೆ ಮತ್ತು ಸತ್ಯದಂತಹ ಮಾನವೀಯತೆಯ ಸಾರ್ವತ್ರಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ ಎಂದು ಕರ್ನಾಟಕ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಯಡೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದ ಭವ್ಯ ರಾಜಗೋಪುರವನ್ನು ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಚಂದ್ರಾಪುರಂ ಪೊನ್ನುಸಾಮಿ ರಾಧಾಕೃಷ್ಣನ್ ಅವರು ಇಂದು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, “ನಮ್ಮ ಸಂಸ್ಕೃತಿ ಶಾಶ್ವತವಾಗಿದ್ದು, ಅನಾದಿ ಕಾಲದಿಂದ ಸಂತರು, ಋಷಿಗಳು ಮತ್ತು ಜ್ಞಾನಿಗಳಿಂದ ರಕ್ಷಿಸಲ್ಪಟ್ಟಿದೆ. ‘ವಸುಧೈವ ಕುಟುಂಬಕಂ’ ಎಂಬ ತತ್ವ – ಇಡೀ ಜಗತ್ತು ಒಂದೇ ಕುಟುಂಬ ಎಂಬುದು ನಮ್ಮ ಧರ್ಮದ ಮೂಲಭೂತ ಸಿದ್ಧಾಂತ. ‘ನರ ಸೇವೆಯೇ ನಾರಾಯಣ ಸೇವೆ’ ಎಂಬ ಭಾವನೆ ಸಾರ್ವಜನಿಕ ಕಲ್ಯಾಣವನ್ನು ಬಲಪಡಿಸುತ್ತದೆ” ಎಂದರು.
ಭಾರತದ ಆಧ್ಯಾತ್ಮಿಕ ಪರಂಪರೆಗಳು ಮಾನವೀಯ ಮೌಲ್ಯಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುತ್ತವೆ ಎಂದು ಅವರು ಉಲ್ಲೇಖಿಸಿದರು. “ಈ ಮೌಲ್ಯಗಳು ವಿಶ್ವ ಶಾಂತಿ ಮತ್ತು ಜಾಗತಿಕ ಯೋಗಕ್ಷೇಮಕ್ಕೆ ಅಡಿಪಾಯವಾಗಿವೆ. ಇಂದು ಅನೇಕ ದೇಶಗಳು ಆಧ್ಯಾತ್ಮಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಭಾರತದತ್ತ ನೋಡುತ್ತಿವೆ” ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮಹತ್ವ ಸಿಕ್ಕಿದೆ ಎಂದು ರಾಜ್ಯಪಾಲರು ತಿಳಿಸಿದರು. “ಆಡಳಿತ ಮತ್ತು ಸಂತ ಸಂಪ್ರದಾಯಗಳು ಒಂದೇ ವೇದಿಕೆಯಲ್ಲಿ ಸೇರಿದಾಗ ಸಮಾಜಕ್ಕೆ ಹೊಸ ಸ್ಫೂರ್ತಿ ದೊರೆಯುತ್ತದೆ. ಯಡೂರು ಶ್ರೀ ಕ್ಷೇತ್ರ ಭಕ್ತರಿಗೆ ಆಧ್ಯಾತ್ಮಿಕ ಶಾಂತಿಯ ಮೂಲವಾಗಿದ್ದು, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೇಂದ್ರವಾಗಿ ಮಾರ್ಪಟ್ಟಿದೆ” ಎಂದರು.

ಶ್ರೀ ಕಡದೇವರ ಮಠದ ಸೇವಾ ಕಾರ್ಯಗಳನ್ನು ಪ್ರಶಂಸಿಸಿದ ಅವರು, ರಾಜಗೋಪುರ, ಕಲಶಾರೋಹಣ ಮತ್ತು ಮಹಾಕುಂಭಾಭಿಷೇಕದ ಉದ್ಘಾಟನೆಯು ಈ ಕ್ಷೇತ್ರದ ಘನತೆಯನ್ನು ಹೆಚ್ಚಿಸುತ್ತದೆ ಎಂದರು. “ರಾಜಗೋಪುರವು ವಾಸ್ತುಶಿಲ್ಪ, ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ಪ್ರಜ್ಞೆಯ ಜೀವಂತ ಸಂಕೇತ. ಇದು ಆಧ್ಯಾತ್ಮಿಕ ಎತ್ತರ ಸಾಧಿಸಲು ಸಮರ್ಪಣೆ, ಶಿಸ್ತು ಮತ್ತು ಸೇವೆಯ ಮಹತ್ವವನ್ನು ನೆನಪಿಸುತ್ತದೆ” ಎಂದು ವಿವರಿಸಿದರು.
ವೇದ ಪಠಣದೊಂದಿಗೆ ನಡೆದ ಕಲಶಾರೋಹಣ ಮತ್ತು ಮಹಾಕುಂಭಾಭಿಷೇಕವು ಧಾಮಕ್ಕೆ ಹೊಸ ಆಧ್ಯಾತ್ಮಿಕ ಶಕ್ತಿಯನ್ನು ತುಂಬುತ್ತಿದೆ ಎಂದು ಹೇಳಿದ ರಾಜ್ಯಪಾಲರು, ನೈತಿಕ ಮೌಲ್ಯಗಳು, ಏಕತೆ ಮತ್ತು ಸಾಮರಸ್ಯವನ್ನು ಪುನಃಸ್ಥಾಪಿಸುವ ಸಂದೇಶ ನೀಡುತ್ತದೆ ಎಂದರು.
“ಧರ್ಮ ಮತ್ತು ಸಂಸ್ಕೃತಿಯನ್ನು ಬಲಪಡಿಸಿ, ಸಂಘಟಿತರಾಗಿ ಲೋಕೋಪಕಾರಿ ಕೆಲಸಗಳನ್ನು ಮಾಡೋಣ” ಎಂದು ಅವರು ಸಮಾಜಕ್ಕೆ ಕರೆ ನೀಡಿದರು.
ಸಮಾರಂಭದಲ್ಲಿ ಸಚಿವ ಶ್ರೀ ಸತೀಶ್ ಜಾರಕಿಹೊಳಿ, ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತ್ರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀ ಕಾಶಿ ಮಹಾಪೀಠದ ಪರಮಪೂಜ್ಯ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ ಮಹಾಸ್ವಾಮೀಜಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.












