ಬೆಂಗಳೂರು: ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ವಲಯವನ್ನು ಭವಿಷ್ಯದ ಕೈಗಾರಿಕಾ ಸವಾಲುಗಳಿಗೆ ಸಜ್ಜುಗೊಳಿಸಲು ಹೊಸ ಎಂಎಸ್‌ಎಂಇ ನೀತಿಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಡಿಜಿಟಲ್ ಪರಿವರ್ತನೆಗೆ ಸಂಬಂಧಿಸಿದ ರೂಪುರೇಷೆಗಳನ್ನು ಸೇರಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಎಂಎಸ್‌ಎಂಇ, ಸಕ್ಕರೆ ಮತ್ತು ವಸ್ತ್ರ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಮಂಗಳವಾರ ಕಾಸ್ಸಿಯಾ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಹಿತಾಸಕ್ತಿದಾರರ ಸಮಾಲೋಚನಾ ಕಾರ್ಯಾಗಾರವನ್ನು ಉದ್ಘಾಟಿಸಿದ ನಂತರ ಅವರು ಮಾತನಾಡಿದರು. ಹೊಸ ಎಂಎಸ್‌ಎಂಇ ನೀತಿ ರೂಪಿಸಲು ಕೈಗಾರಿಕಾ ವಲಯದ ಅಭಿಪ್ರಾಯಗಳನ್ನು ಸಂಗ್ರಹಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕರ್ನಾಟಕದಲ್ಲಿ ಒಟ್ಟು ಕೈಗಾರಿಕಾ ಘಟಕಗಳಲ್ಲಿನ ಸುಮಾರು ಶೇ.97ರಷ್ಟು ಎಂಎಸ್‌ಎಂಇಗಳೇ ಇದ್ದು, ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಪ್ರಮುಖ ಮೂಲವಾಗಿವೆ ಎಂದು ರೋಹಿಣಿ ಸಿಂಧೂರಿ ಹೇಳಿದರು. ಈ ವಲಯದ ಮಹತ್ವವನ್ನು ಮನಗಂಡು ಎಂಎಸ್‌ಎಂಇ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಆಧುನೀಕರಿಸಲು ವಿಶೇಷ ನೀತಿ ರೂಪಿಸುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ ಎಂದರು.

“ಮೊದಲ ಹಂತವಾಗಿ ರಾಜ್ಯ ಮಟ್ಟದ ಹಿತಾಸಕ್ತಿದಾರರ ಸಮಾಲೋಚನಾ ಕಾರ್ಯಾಗಾರವನ್ನು ನಡೆಸಿದ್ದೇವೆ. ಮುಂದಿನ ವಾರಗಳಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಾದೇಶಿಕ ಸಮಾಲೋಚನಾ ಸಭೆಗಳನ್ನು ನಡೆಸಿ ಕೈಗಾರಿಕೋದ್ಯಮಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ,” ಎಂದು ಅವರು ಹೇಳಿದರು.
ಹೊಸ ನೀತಿಯಲ್ಲಿ ತಂತ್ರಜ್ಞಾನ ಮತ್ತು ನವೀನತೆಗೆ ಪ್ರಮುಖ ಸ್ಥಾನ ನೀಡಲಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ವೇಗವಾಗಿ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಎಂಎಸ್‌ಎಂಇಗಳು ಹೊಂದಿಕೊಳ್ಳಲು ಸಹಾಯಕವಾಗುವಂತೆ ಎಐ ಹಾಗೂ ಡಿಜಿಟಲ್ ಅಳವಡಿಕೆಗೆ ಸಂಬಂಧಿಸಿದ ವಿಶೇಷ ರೂಪುರೇಷೆಗಳನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ಅವರು ತಿಳಿಸಿದರು.
ಎಂಎಸ್‌ಎಂಇಗಳು ರಾಜ್ಯದ ಕೈಗಾರಿಕಾ ಆರ್ಥಿಕತೆಯ ಬೆನ್ನೆಲುಬಾಗಿರುವುದರಿಂದ ಅವುಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ನೀತಿಯನ್ನು ರೂಪಿಸಲಾಗುತ್ತಿದೆ. ಮುಂದಾಳತ್ವದ ಮತ್ತು ಸಮಗ್ರ ನೀತಿ ರೂಪಿಸಲು ಕೈಗಾರಿಕೋದ್ಯಮಿಗಳು ಹಾಗೂ ಕೈಗಾರಿಕಾ ಸಂಘಟನೆಗಳು ತಮ್ಮ ಸಲಹೆಗಳನ್ನು ನೀಡುವಂತೆ ರೋಹಿಣಿ ಸಿಂಧೂರಿ ಆಹ್ವಾನಿಸಿದರು.
ಕಾರ್ಯಾಗಾರದಲ್ಲಿ ಕಾಸ್ಸಿಯಾ ಅಧ್ಯಕ್ಷ ಬಿ.ಆರ್. ಗಣೇಶ್ ರಾವ್, ಎಂಎಸ್‌ಎಂಇ ಇಲಾಖೆಯ ನಿರ್ದೇಶಕ ಡಾ. ಸತೀಶ್ ಬಿ.ಸಿ., ಪೀಣ್ಯ ಕೈಗಾರಿಕಾ ಪ್ರದೇಶ ಸಂಘದ ಅಧ್ಯಕ್ಷ ಡಿ.ಪಿ. ದನಪ್ಪ, ಅವೇಕ್ ಅಧ್ಯಕ್ಷೆ ಭುವನೇಶ್ವರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕೈಗಾರಿಕೋದ್ಯಮಿಗಳು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.












